ಕಲಬುರಗಿ: ಕೋವಿಡ್ ನಿಂದಾಗಿ ಶಾಲೆಗಳು ಮುಚ್ಚಿರುವ ಪರಿಣಾಮ ಬಡ ಮಕ್ಕಳಿಗೆ ಆನಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕೂಡ ಹೆಚ್ಚಿದ್ದು , ವಿಧಾನ ಮಂಡಲ ಅಧಿವೇಶನದಲ್ಲಿ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಮನವಿ ಮಾಡಿದ್ದಾರೆ.
ಶಾಲೆಗಳು ದೀರ್ಘವಧಿ ಮುಚ್ಚಿದ ಕಾರಣ ಕೆಲ ಮಕ್ಕಳಿಗೆ ಮುಂದಿನ ಹಂತದ ಶಿಕ್ಷಣ ಪಡೆಯುವುದು ಸಮಸ್ಯೆಯಾಗಿದೆ. ಲಾಕ್ ಡೌನ್ ನಲ್ಲಿ ರಾಜ್ಯದಲ್ಲೂ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ. ಮಕ್ಕಳ ಕಳ್ಳ ಸಾಗಣೆ , ಬಿಕ್ಷೆಗೆ ದೂಡುವುದು ಕೂಡ ನಡೆಯುತ್ತಿದೆ. ಕೋವಿಡ್ ನಿಂದಾಗಿ ಗ್ರಾಮೀಣ ಪ್ರದೇಶಕ್ಕೆ ವಾಪಸ್ ಆದ ಕೆಲ ಕುಟುಂಬಗಳು ಮಕ್ಕಳನ್ನು ಕೃಷಿ ಕ್ಷೇತ್ರದಲ್ಲಿ ದುಡಿಯಲು ಬಳಸಿಕೊಳ್ಳುತ್ತಿವೆ. ಶಾಲೆಗಳು ಪಠ್ಯಪುಸ್ತಕ , ಆನಲೈನ್ ಶಿಕ್ಷಣಕ್ಕೆ ಹೆಚ್ಚಿನ ಶುಲ್ಕ ಕೇಳುತ್ತಿದ್ದಾರೆ. ಕೆಲಸ ಕಳೆದುಕೊಂಡ ಪೋಷಕರಿಗೆ ಮಕ್ಕಳ ಶಿಕ್ಷಣ ದೊಡ್ಡ ಸವಾಲಾಗಿದೆ ಎಂದು ತಿಳಿಸಿದ್ದಾರೆ.
ಹೊರಾಂಗಣ ಆಟಗಳು ಇಲ್ಲದ ಕಾರಣ ಮಕ್ಕಳು ಮಾನಸಿಕವಾಗಿ ದುರ್ಬಲವಾಗುತ್ತಿದ್ದಾರೆ. ಕೆಲ ಮಕ್ಕಳಿಗೆ ಪೌಷ್ಟಿಕ ಆಹಾರ ಕೂಡ ಸಿಗುತ್ತಿಲ್ಲ. ಚುಚ್ಚುಮದ್ದಿನ ಕಾರ್ಯಕ್ರಮಗಳು ಸಮರ್ಪಕವಾಗಿ ನಡೆದಿಲ್ಲ. ಹಾಗಾಗಿ ಅಧಿವೇಶನದಲ್ಲಿ ಮಕ್ಕಳ ಸಮಸ್ಯೆಯನ್ನು ಆದ್ಯತೆಯಾಗಿ ಚರ್ಚೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.