ಸುರಪುರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಅನೇಕ ಗ್ರಾಮಗಳ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ತಾಲೂಕಿನ ಮಾವಿನಮಟ್ಟಿ ಗ್ರಾಮದ ಕೆರಯ ನೀರು ಗ್ರಾಮದೊಳಗೆ ಹೊಕ್ಕಿದ್ದರಿಂದಾಗಿ ಸುಮಾರು ಹತ್ತಕ್ಕು ಹೆಚ್ಚು ಕುಟುಂಬಗಳು ತುಂಬಾ ತೊಂದರೆ ಅನುಭವಿಸುತ್ತಿವೆ.
ಚಿಕ್ಕ ಚಿಕ್ಕ ಗುಡಿಸಲು ಮನೆಗಳನ್ನು ಮಾಡಿಕೊಂಡಿರುವ ಬಡ ಕುಟುಂಬಗಳು ಮಳೆ ನೀರು ಹೊಕ್ಕು ಮನೆಗಳೆಲ್ಲ ಜಲಾವೃತಗೊಂಡಿದ್ದರಿಂದ ಹಗಲಿರುಳು ಊಟ ನಿದ್ರೆಯಿಲ್ಲದೆ ತೊಂದರೆ ಪಡುವಂತಾಗಿದೆ.ಮನೆಯಲ್ಲಿ ಗರ್ಭೀಣಿ ಮಹಿಳೆಯರಿದ್ದು ಹೆರಿಗೆ ಸಂದರ್ಭದಲ್ಲಿ ಮನೆಯಲ್ಲಿ ನೀರು ಹೊಕ್ಕಿದ್ದರಿಂದ ಕುಟುಂಬಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಸುದ್ದಿ ತಿಳಿದು ತಹಸೀಲ್ದಾರ ನಿಂಗಣ್ಣ ಬಿರಾದಾರ್ ಅವರು ಕಂದಾಯ ಅಧಿಕಾರಿಗಳಿಗೆ ತಿಳಿಸಿ ಸ್ಥಳಕ್ಕೆ ಭೇಟಿ ನೀಡಿದ್ದರಿಂದಾಗಿ ಮಾವಿನಮಟ್ಟಿಯ ತೊಂದರೆಗೊಳಗಾದ ಕುಟುಂಬಗಳಿಗಾಗಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಉಳಿದುಕೊಳ್ಳಲು ಆಶ್ರಯ ಕಲ್ಪಿಸಿದ್ದಲ್ಲದೆ ಗಂಜಿ ಕೇಂದ್ರವನ್ನು ಆರಂಭಿಸಿ ಜನರ ನೆರವಿಗೆ ಧಾವಿಸಿದ್ದಾರೆ.