ವಾಡಿ: ರಾಜ್ಯ ಸರಕಾರ ಸದನದಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್ ಹೋರಾಟವನ್ನು ಬೆಂಬಲಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಪಕ್ಷದ ಕಾರ್ಯಕರ್ತರು ವಾಡಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀನಿವಾಸಗುಡಿ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ರೈತರು ಹಾಗೂ ಎಸ್‍ಯುಸಿಐ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು. ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಗುತ್ತಿಗೆ ಕೃಷಿ ಕಾಯ್ದೆ, ವಿದ್ಯುತ್ ಕಾಯ್ದೆ 2002ರ ತಿದ್ದುಪಡಿ, ಬೆಂಬಲ ಬೆಲೆ ಕಾಯ್ದೆ ತಿದ್ದುಪಡಿಗಳ ಮೂಲಕ ಭೂಸುಧಾರಣಾ ಕಾಯ್ದೆ ಅಂಗೀಕರಿಸಿರುವುದು ರೈತ ವಿರೋಧಿ ನಿಲುವಾಗಿದೆ. ಕೃಷಿ ವಲಯವನ್ನು ಬಂಡವಾಳಶಾಹಿ ಶೋಷಕರ ಹಿಡಿತಕ್ಕೆ ಒಪ್ಪಿಸಲಾಗುತ್ತಿದೆ.
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಿದ ಯಡಿಯೂರಪ್ಪ ನೇತೃತ್ವದ ಭಾಜಪ ಸರಕಾರ ಸಂಪೂರ್ಣ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸಿದೆ ಎಂದು ಆರೋಪಿಸಿದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು. ಇಲ್ಲದಿದ್ದರೆ ಇನ್ನಷ್ಟು ಉಗ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‍ಕೆಎಸ್) ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ ಎಚ್ಚರಿಸಿದರು.
ರೈತ ಕೃಷಿ ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷ ರಾಘವೇಂದ್ರ ಅಲ್ಲಿಪುರಕರ, ಮಲ್ಲಿಕಾರ್ಜುನ ಗಂದಿ, ಮಲ್ಲಣ್ಣ ದಂಡಬಾ, ವೆಂಕಟೇಶ ದೇವದುರ್ಗ, ಅರುಣ ಹಿರೆಬಾನರ್, ಗೌತಮ ಪರತೂರಕರ, ವಿಠ್ಠಲ ರಾಠೋಡ, ಯೇಶಪ್ಪ ಕೇದಾರ, ರಾಜು ಒಡೆಯರ್, ಚೌಡಪ್ಪ ಗಂಜಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.