ಕೋಲಾರ: ನಗರದಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕೋಲಾರ ಜಿಲ್ಲಾಧ್ಯಕ್ಷರಾದ ಎಂ.ಕೆ. ರಾಘವೇಂದ್ರ ರವರು ಮಾತನಾಡಿ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿ ಕಾಯ್ದೆ ರೂಪಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ, ಕಾರ್ಪೊರೇಟ್ ದಬ್ಬಾಳಿಕೆಗೆ ರೈತರನ್ನು ಬಲಿಕೊಡಬೇಡಿ, ಎಪಿಎಂಸಿ ಕಾಯ್ದೆ ಮತು ಭೂ ತಿದ್ದುಪಡಿ ಜಾರಿಗೆ ತರುವುದರಿಂದ ಅನ್ನದಾತನಿಗೆ ತೊಂದರೆಯಾಗುತ್ತದೆ, ಕೂಡಲೇ ರಾಜ್ಯ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಮಸೂದೆ ಜಾರಿ ಆದರೆ ಸರ್ಕಾರದಿಂದ ಸಿಗುವ ಕನಿಷ್ಠ ಬೆಲೆಯೂ ಇಲ್ಲದಂತೆ ಆಗುತ್ತದೆ ಎಂಬ ಆತಂಕದಲ್ಲಿ ರೈತರಿದ್ದಾರೆ. ಕೃಷಿ-ವ್ಯವಹಾರಗಳಲ್ಲಿ ದೊಡ್ಡ ಚಿಲ್ಲರೆ ವ್ಯಾಪಾರಿಗಳು ಮಾತುಕತೆಗಳಲ್ಲಿ ಮೇಲುಗೈ ಸಾಧಿಸುತ್ತಾರೆ. ಇದರಿಂದಾಗಿ ರೈತರಿಗೆ ಅನಾನುಕೂಲವಾಗುತ್ತದೆ ಎಂದು ಭಯ ಪಡುತ್ತಿದ್ದಾರೆ.
ರೈತರು ಸಂಘ ಸಂಸ್ಥೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಏರಿ ತಮ್ಮ ಹಕ್ಕನ್ನು ಸಾಧಿಸಬಹುದಿತ್ತು. ಆದರೆ ಈ ಮಸೂದೆ ಜಾರಿಯಾದ ಮೇಲೆ ದೊಡ್ಡ ಕಂಪನಿಗಳ ವಿರುದ್ಧ ರೈತರು ಸುಮ್ಮನಾಗಬೇಕಾಗುತ್ತದೆ. ಇವರ ಬಳಿ ಚೌಕಾಶಿ ಮಾಡಲು ರೈತರು ಅಸಮರ್ಥರಾಗುತ್ತಾರೆ ಎಂದರು. ಒಂದು ವೇಳೆ ಈ ಮಸೂದೆಗಳನ್ನು ಹಿಂಪಡೆಯದಿದ್ದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕೋಲಾರ ಜಿಲ್ಲಾಧ್ಯಕ್ಷರಾದ ಮೇಡಿಹಾಳ ಎಂ. ಕೆ.ರಾಘವೇಂದ್ರ, ಪ್ರಭಾಕರ್ ಗೌಡ ಕರವೇ ಯುವ ಮುಖಂಡರು, ಜಿಲ್ಲಾ ಉಪಾಧ್ಯಕ್ಷರಾದ ಎಸ್. ಎಂ ರಾಜು, ಜಿಲ್ಲಾ ಪ್ರದಾನ ಸಂಚಾಲಕರು ಮೆಹಬೂಬ್ , ಕೋಲಾರ ತಾಲೂಕು ಉಪಾಧ್ಯಕ್ಷರಾದ ನರಸಾಪುರ ಮುರಳಿ, ಕರವೇ ಯುವ ಮುಖಂಡರಾದ ಸಿಂಗೊಂಡಹಳ್ಳಿ ಸುನೀಲ್ ಕುಮಾರ್ , ಯುವ ಘಟಕದ ಅಧ್ಯಕ್ಷರಾದ ಸೂಲೂರು ನವೀನ್, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಮಂಜುನಾಥ್, ನವೀನ್, ರಮೇಶ್, ನವಾಜ್ ಹಾಗೂ ಕೋಲಾರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.