ಕಲಬುರಗಿ: ಹಿರಿಯರು ಮನೆಯಲ್ಲಿದ್ದರೆ ಕುಟುಂಬಗಳಲ್ಲಿ ಕಲಹಗಳು ಕಡಿಮೆಯಾಗುವುದಲ್ಲದೆ ಕುಟುಂಬ ನಿರ್ವಹಣೆ ಸಾಧ್ಯ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪ ನಿರ್ದೇಶಕರಾದ ಶಿವಶರಣಪ್ಪ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬಗಳಲ್ಲಿ ಹಿರಿಯರಿದ್ದರೆ ಕಲಹ ಉದ್ಭವಿಸದಂತೆ ಅಗತ್ಯ ಮಾರ್ಗದರ್ಶನ ನೀಡಿ ಸುಂದರ ಕುಟುಂಬ ರೂಪಿಸುವಲ್ಲಿ ಪಾತ್ರ ವಹಿಸುತ್ತಾರೆ ಎಂದ ಅವರು, ಪೋಷಕರು ತಮ್ಮ ಮಕ್ಕಳಿಗಾಗಿ ಜೀವನದುದ್ದಕ್ಕೂ ಶ್ರಮಿಸಿ ಒಳ್ಳೆಯ ಜೀವನ ರೂಪಿಸಿಕೊಡುತ್ತಾರೆ. ಅದೇ ಮಕ್ಕಳು ತಮ್ಮ ತಂದೆ-ತಾಯಿಗಳನ್ನು ಮನೆಯಿಂದ ಹೊರ ಹಾಕುವುದು ಸಾಮಾನ್ಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಹಿರಿಯ ಜೀವಿಗಳು ಎದೆಗುಂದದೆ ಹಿರಿಯ ನಾಗರಿಕರ ಕಾಯ್ದೆಯ ಜಾರಿಗೆ ತಂದಿದ್ದು, ತೊಂದರೆಯಾದ ಸಂದರ್ಭದಲ್ಲಿ ಹಿರಿಯ ನಾಗರಿಕರ ಸೇವಾ ಕೇಂದ್ರಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರಕಾರ ಹಿರಿಯ ಜೀವಿಗಳಿಗಾಗಿ ವೃದ್ಧಾಪ್ಯ ವೇತನ, ವೈದ್ಯಕೀಯ ಸೌಲಭ್ಯ ಸೇರಿದಂತೆ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಸೌಲಭ್ಯ ಪಡೆದುಕೊಂಡು ಸುಂದರವಾದ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ನ್ಯಾಯವಾದಿ ಶಿವಶರಣಪ್ಪ ಅವರು ಮಾತನಾಡಿ, ಸಂವಿಧಾನದಲ್ಲಿ ಹಿರಿಯ ನಾಗರಿಕರಿಗಾಗಿ ಕಾಯ್ದೆ ತಂದಿದ್ದು, ಈ ನಿಟ್ಟಿನಲ್ಲಿ ಹಿರಿಯರು ಕಾಯ್ದೆ ಕುರಿತು ಅಗತ್ಯ ಮಾಹಿತಿ ಪಡೆದುಕೊಂಡು ತಮ್ಮ ಹಕ್ಕು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷರಾದ ಕಾಶಪ್ಪ ವಂಜರಖೇಡ ಅವರು ಮಾತನಾಡಿ, ಹಿರಿಯ ನಾಗರಿಕರು ಹಲವಾರು ತೊಂದರೆ ನಿವಾರಣೆಗಾಗಿ ನಿವೃತ್ತ ನೌಕರರ ಸಂಘದಿಂದ ಗೃಹ ಸನ್ಮಾನ ಕಾರ್ಯಕ್ರಮ ಹಿರಿಯರಿಗೆ ಉತ್ತೇಜನ ನೀಡುವಂತಹ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಎನ್‍ಜಿಓ ಮುಖ್ಯಸ್ಥ ಮಸ್ತಾನ್ ಬಿರಾದಾರ್ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಾಣೆಯಾಗುತ್ತಿರುವುದಕ್ಕೆ ಬೇಸರ ಮೂಡುತ್ತಿದ್ದು, ವಿಭಕ್ತ ಕುಟುಂಬಗಳಿಂದಾಗಿ ಹಿರಿಯ ಮೇಲೆ ಪರಿಣಾಮ ಬೀರುತ್ತಿದೆ. ಹಿರಿಯ ಮಾರ್ಗದರ್ಶನ ಪಡೆದು ಜನತೆ ಹೊಂದಾಣಿಕೆ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಹಿರಿಯರಿಗೆ ಸನ್ಮಾನ ಮಾಡಲಾಯಿತು. ಕಿವುಡ ಮತ್ತು ಮೂಕ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ವೆಂಕಟೇಶ್ ದೇಶಪಾಂಡೆ, ಮಾರ್ಗದರ್ಶನ ಚಾರಿಟೇಬಲ್ ಟ್ರಸ್ಟ್ ಮಾರ್ಗದರ್ಶಕ ಆನಂದರಾಜ್, ಅಂಧ ಮಕ್ಕಳ ಶಾಲೆಯ ಅಧೀಕ್ಷಕಿ ಸಂಗಮ್ಮ ಇನ್ನಿತರರು ಉಪಸ್ಥಿತರಿದ್ದರು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಖಾನ್ ಸ್ವಾಗತಿಸಿದರು. ಪ್ರಕಾಶ್ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು.