ಕಲಬುರಗಿ: ದಿ. ಸುರೇಶ ಅಂಗಡಿ ಅವರ ಅಗಲಿಕೆಯಿಂದ ತೆರವಾದ ಸಚಿವ ಸ್ಥಾನಕ್ಕೆ, ವೀರಶೈವ ಲಿಂಗಾಯತ ಸಂಸದರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ. ಶರಣ ಬಿ ಪಾಟೀಲ್ ಹಾಗೂ ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್ ಪಾಟೀಲ್ ನರಿಬೋಳ ಮನವಿ ಮಾಡಿದ್ದಾರೆ.
ರಾಜ್ಯದ ಜನಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜದ್ದೆ ಸಿಂಹ ಪಾಲಿದೆ. ಆದರೂ ಕೇಂದ್ರ ಮಂತ್ರಿಮಂಡಲದಲ್ಲಿ ವೀರಶೈವ ಲಿಂಗಾಯತ ಸಂಸಂದರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದಿ.ಸುರೇಶ ಅಂಗಡಿ ಅವರನ್ನು ಕೇಂದ್ರ ಸರ್ಕಾರದ ಸಚಿವರನ್ನಾಗಿಸುವ ಮೂಲಕ ನಮ್ಮ ಸಮಾಜದ ನಾಯಕರಿಗೆ ಅವಕಾಶ ನೀಡಿದ್ದರು.
ಅದರಂತೆ ಅವರು ತಮಗೆ ನೀಡಿರುವ ರೇಲ್ವೆ ಖಾತೆಯನ್ನು ತುಂಬಾ ಉತ್ಸುಕತೆಯಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕೆಟ್ಟ ಘಳಿಗೆಯೊ, ಏನೊ ಅವಧಿ ಪೂರ್ಣಗೊಳ್ಳುವ ಮುನ್ನವೇ ದಿ. ಸುರೇಶ ಅಂಗಡಿ ಅವರು ಏಕಾಏಕಿ ನಮ್ಮನ್ನಗಲಿದ್ದರಿಂದ ವೀರಶೈವ ಲಿಂಗಾಯತರಿಗೆ ಸಿಕ್ಕ ಒಂದು ಅವಕಾಶವು ಅರ್ಧದಲ್ಲೆ ಮೊಟಕಿಹೋದಂತಾಯಿತು. ಹೀಗಾಗಿ ಮುಂಬರುವ ದಿನಗಳಲ್ಲಿ ದಿ. ಸುರೇಶ ಅಂಗಡಿ ಅವರ ಅಗಲಿಕೆಯಿಂದ ತೆರವಾದ ಸಚಿವ ಸ್ಥಾನಕ್ಕೆ ನಮ್ಮ ವೀರಶೈವ ಲಿಂಗಾಯತ ಸಂಸದರಲ್ಲೆ ಒಬ್ಬರಿಗೆ ಅವಕಾಶ ನೀಡಬೆಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ವೀರಶೈವ ಲಿಂಗಾಯತ ಮಾಹಾಸಬಾ ಮುಖಂಡರ ನಿಯೋಗವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದೆ ಎಂದು ತಿಳಿಸಿದ್ದಾರೆ.