ಶಹಾಬಾದ:ನಾವು ಆರೋಗ್ಯ ಕಾಪಾಡುವುದರ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.ಆದ್ದರಿಂದ ನಾವು ಮಾಸ್ಕ ಧರಿಸಬೇಕು.ಅಲ್ಲದೇ ಮತ್ತೊಬ್ಬರಿಗೂ ಮಾಸ್ಕ ಧರಿಸುವಂತೆ ತಿಳಿ ಹೇಳಬೇಕೆಂದು ಡಿವೈಎಸಪಿ ವೆಂಕನಗೌಡ ಪಾಟೀಲ ಹೇಳಿದರು.
ಅವರು ಮಂಗಳವಾರ ಪೊಲೀಸ್ ಇಲಾಖೆ ವತಿಯಿಂದ ನಗರದ ರೇಲ್ವೆ ನಿಲ್ದಾಣದಲ್ಲಿ ಆಯೋಜಿಸಲಾದ ಕೋವಿಡ್ -19 ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊರೊನಾ ವೈರಸ್ ತಡೆಗಟ್ಟಲು ಪ್ರತಿಯೊಬ್ಬರೂ ಮಾಸ್ಕ ಧರಿಸಿಕೊಳ್ಳಿ. ಜನರಿಗೂ ತಿಳುವಳಿಕೆಯಿದ್ದರೂ ಸಾಮಾಜಿಕ ಅಂತರ, ಮಾಸ್ಕ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಇದರಿಂದ ಕೊರೊನಾ ಆಹ್ವಾನಕ್ಕೆ ದಾರಿಯಾಗುತ್ತದೆ.ಆರೋಗ್ಯ ಭಾಗ್ಯಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ. ಆರೋಗ್ಯದಿಂದ ಇದ್ದಾಗ ಮಾತ್ರ ಮತ್ತೊಂದು ಮಾಡಲು ಸಾಧ್ಯ ಎಂಬ ಅರಿವು ಜನರು ಮನದಟ್ಟು ಮಾಡಿಕೊಳ್ಳಬೇಕೆಂದು ಹೇಳಿದರಲ್ಲದೇ, ಸಾಬೂನು ಹಾಗೂ ಹ್ಯಾಂಡ ವಾಶಗಳ ಮೂಲಕವೇ ಕೈ ತೊಳೆದುಕೊಳ್ಳಿ.ಸ್ಯಾನಿಟೈಜರ್ ಬಳಕೆ ಮಾಡಿ ಕೊರೊನಾ ವೈರಸನಿಂದ ದೂರವಿರಿ ಎಂದು ಹೇಳಿದರು.
ಪಿಐ ಅಮರೇಶ.ಬಿ ಮಾತನಾಡಿ, ಕೊರೊನಾ ರೋಗ ವ್ಯಾಪಕವಾಗಿ ಹರಡುತ್ತಿದೆ.ಈ ಬಗ್ಗೆ ಸಾರ್ವಜನಿಕರು ನಿರ್ಲಕ್ಷ್ಯ ತೋರದೇ ಆದಷ್ಟು ಎಚ್ಚರದಿಂದ ಇರಿ.ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ, ಸ್ಯಾನಿಟೈಜರ್ ಬಳಕೆ ಮಾಡಿ.ಎಲ್ಲೆಂದರಲ್ಲಿ ಗುಂಪು ಜನರಿರುವ ಸ್ಥಳದಲ್ಲಿ ಸೇರಬೇಡಿ.ಮನೆಯ ಹಿರಿಯ ಜೀವಿಗಳನ್ನು ಮನೆಯಿಂದ ಹೊರಗೆ ಕಳಿಸಬೇಡಿ.ಆಗಾಗ ರೋಗನಿರೋಧಕ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಕರೊನಾವನ್ನು ಹೊಡೆದೋಡಿಸಿ ಎಂದು ಹೇಳಿದರು.
ಪಿಎಸ್ಐ ತಿರುಮಲೇಶ ಮಾತನಾಡಿ, ಜಗತ್ತಿಗೆ ತಲ್ಲಣ ಮೂಡಿಸಿದ ಕರೊನಾ ಇಂದು ವ್ಯಾಪಕವಾಗಿ ಹರಡಿ ಅನೇಕ ಜನರು ಸಾವನಪ್ಪಿದ್ದಾರೆ.ಆದರೂ ಜನರಿಗೆ ಈ ಬಗ್ಗೆ ಗೊತ್ತಿದ್ದರೂ ಮಾಸ್ಕ ಧರಿಸದೇ ಹೊರಬರುತ್ತಾರೆ.ಇದರಿಂದ ತಮ್ಮ ರೋಗ ಹರಡುವ ಸಾಧ್ಯತೆಯಿದೆ.ಅಲ್ಲದೇ ಸಮಾಜದ ಸ್ವಾಸ್ಥ್ಯ ಹದಗೆಡಲು ಕಾರಣವಾಗುತ್ತದೆ.ಅಂಗಡಿಯ ಮಾಲೀಕರು ಮಾಸ್ಕ ಹಾಕಿಕೊಂಡು ಹಾಗೂ ಸ್ಯಾನಿಟೈಜರ್ ಇಟ್ಟು ವ್ಯಾಪಾರ ಮಾಡಬೇಕು.ಆದರೂ ಅವರು ಮಾಸ್ಕ ಧರಿಸುತ್ತಿಲ್ಲ. ಆದ್ದರಿಂದ ಮಾಸ್ಕ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ.ದಂಡಕ್ಕಾಗಿ ಮಾಸ್ಕ ಧರಿಸಿಕೊಳ್ಳುವಂತ ಚಾಳಿ ಬೆಳೆಸಿಕೊಳ್ಳದೇ, ತಮ್ಮ ಹಾಗೂ ಸಮಾಜದ ಆರೋಗ್ಯ ಕಾಪಾಡಲು ಮಾಸ್ಕ ಧರಿಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರದ ಮುಖಂಡರು, ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.