ಕಲಬುರಗಿ: ರಾಷ್ಟ್ರಕೂಟ ದೊರೆ ನೃಪತುಂಗ ಸಮಾಜಮುಖಿ ಅರಸರಾಗಿದ್ದರು. ದಕ್ಷಿಣ ಭಾರತಕ್ಕೆ ಇವರ ಕೊಡುಗೆ ಅಪಾರ ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ನಗರದ ರಂಗಾಯಣದಲ್ಲಿ ಭಾನುವಾರ ನಡೆದ ಸಾಹಿತ್ಯ ಸಾರಥ್ಯ ಮೂರನೆ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನೃಪತುಂಗ ಅರಸನ ಕಾಲದಲ್ಲಿ ರಚಿತವಾದ ಕವಿರಾಜ ಮಾರ್ಗ ಕೃತಿ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ ಎಂದು ತಿಳಿಸಿದರು.
ಪ್ರಪಂಚದ ಆರ್ಥಿಕ ಆದಾಯ ಕಡಿಮೆಯಾಗಿರುವುದರಿಂದ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ರದ್ದು ಮಾಡಬೇಕು. ಕರೊನಾದ ಈ ಸಂದರ್ಭದಲ್ಲಿ ಈ ಪ್ರಶಸ್ತಿಗಾಗಿ ಕ್ಯೂ ನಿಂತಿರುವುದು ವಿಷಾದದ ಸಂಗತಿ. ಹೀಗಾಗಿ ಪ್ರಶಸ್ತಿಯನ್ನು ಅನುಮಾನದಿಂದ ನೋಡುವಂತಾಗಿದೆ ಎಂದರು.
ಪ್ರಶಸ್ತಿಗೆ ಬಂದ ಹಣವನ್ನು ಸಮಾಜದ ಇತರರಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಕೊಡುವ ಕ್ರಿಯೆ ಕರ್ನಾಟಕದ ಸ್ಥಾಯಿಭಾವ ಅದು. ಈ ನೆಲಕ್ಕೆ ನಾವು ಚಿರೃಣಿಯಾಗಿರಬೇಕು ಎಂದು ವಿವರಿಸಿದರು.
ಪ್ರಶಸ್ತಿ ಪುರಸ್ಕೃತರಿಗೆ ಸೂರು ಪೇಟ ದಾಸ್ಯದ ಸಂಕೇತ. ಕಲಬುರಗಿಯ ರುಮಾಲು, ಟೋಪಿ ಕೊಡಬೇಕು. ಪ್ರಶಸ್ತಿ ನಮ್ಮ ಆತ್ಮವಿಶ್ವಾಸ ತುಂಬುವಂಥದು.
ಬಾಯಿ ಮುಚ್ಚಿಸುವುದಕ್ಕಾಗಿ ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಾಗಿ ಸರ್ಕಾರ ಪ್ರಶಸ್ತಿ ಕೊಡಲಾಗುತ್ತಿದೆ. ನಿರ್ವೀರ್ಯತೆ, ನಿಷ್ಕ್ರಿಯತೆಯನ್ನು ಹುಟ್ಟು ಹಾಕಬಲ್ಲದು. ಹೀಗಾಗಿ ಈ ಬಗ್ಗೆ ಸಣ್ಣ ಅನುಮಾನ ಇಟ್ಟುಕೊಳ್ಳಬೇಕು ಎಂದು ಸಾಹಿತಿಗಳಿಗೆ ಕಿವಿ ಮಾತು ಹೇಳಿದರು.
ವ್ಯವಸ್ಥೆಯ ವಿರುದ್ಧ ಮಾತನಾಡುವ, ಬರೆಯುವ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯವಾಗುತ್ತದೆ. ಲೇಖಕ ವಿರೋಧ ಪಕ್ಷದ ಧುರೀಣನಾಗಿರಬೇಕು. ಹೊಗಳಭಟ್ಟರನ್ನು, ಸರ್ಕಾರಿ ಕೃಪಾಪೋಷಿತ ಪ್ರಶಸ್ತಿಗಳನ್ನು ನಿರಾಕರಿಸಬೇಕು ಎಂದು ವಿವರಿಸಿದರು.
ಖಜೂರಿ ಮಠದ ಕೋರಣೇಶ್ವರ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಡಾ. ಅಮೂಲ ಪತಂಗೆ ಮುಖ್ಯ ಅತಿಥಿಗಳಾಗಿದ್ದರು.
ಇದೇ ವೇಳೆಯಲ್ಲಿ ಶಿವರಾಯ ದೊಡ್ಡಮನಿ, ಸಿದ್ಧರಾಮ ಹೊನ್ಕಲ್, ಸಂಧ್ಯಾ ಹೊನಗುಂಟಿಕರ, ಡಾ. ನಾಗೇಂದ್ರ ಮಸೂತಿ, ಎಸ್.ಎನ್. ದಂಡಿನಕುಮಾರ, ಪಿ.ಎಂ.ಮಠ, ಮಹೇಶ ಬಡಿಗೇರ, ಮಹ್ಮದ್ ಅಯಾಜುದ್ದೀನ್, ಎಚ್.ಎಸ್. ಬೇನಾಳ ಅವರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತ್ಯ ಸಾರಥಿ ಸಂಪಾದಕ ಬಿ.ಎಚ್. ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.
ಡಾ. ಎಚ್.ಟಿ. ಪೋತೆ, ಪಿ.ಎಂ.ಮಣ್ಣೂರ, ಮಹಿಪಾಲರೆಡ್ಡಿ ಮುನ್ನೂರ, ಚಾಮರಾಜ ದೊಡ್ಡಮನಿ, ಸುರೇಶ ಬಡಿಗೇರ ಇತರರು ಇದ್ದರು.