ಯಾದಗಿರ: ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ‘ಆದಿಕವಿ’ ಮಹರ್ಷಿ ವಾಲ್ಮೀಕಿಯ ಜಯಂತ್ಯುತ್ಸವವನ್ನು ಅಕ್ಟೋಬರ್ 31ರಂದು ಕರ್ನಾಟಕ ರಾಜ್ಯಾದ್ಯಂತ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.
ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶನಿವಾರ ಬೆಳಗ್ಗೆ 10.30ಕ್ಕೆ ಸಾಹಿತ್ಯ ಇತಿಹಾಸದ ಅತ್ಯುನ್ನತ ಕೃತಿ ರಾಮಾಯಣದ ಕರ್ತೃ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಮಾಯಣದ ಮೂಲಕ ಜೀವನ ಮೌಲ್ಯ ಸಾರಿದ, ತತ್ವಾದರ್ಶಗಳನ್ನು ಬೋಧಿಸಿದ ದಾರ್ಶನಿಕ ಋಷಿಕವಿಗೆ ಅನಂತ ಪ್ರಣಾಮಗಳು ಸಲ್ಲಿಸಲಾಯಿತು.
ರತ್ನಾಕರರಾಗಿರುವ ಇವರು ಹೇಗೆ ವಾಲ್ಮೀಕಿಯಾದರು ಎಂಬುದಕ್ಕೆ ಇದಕ್ಕೊಂದು ಪೌರಾಣಿಕ ಹಿನ್ನಲೆ ಇದೆ. ಶ್ರೀ ವಾಲ್ಮೀಕಿ ಮಹರ್ಷಿಗಳು ಗುರುವಿನ ಅನುಗ್ರಹದಿಂದ ಪ್ರಾಣಿಹಿಂಸೆಯನ್ನು ಬಿಟ್ಟು “ರಾಮತಾರಕ” ಎಂಬ ಮಂತ್ರವನ್ನು ದಿನನಿತ್ಯ ಪಠಿಸುತ್ತಾ ಜಪದಲ್ಲಿ ತೊಡಗಿ, ಅದರಲ್ಲಿಯೇ ತನು ಮನದಿಂದ ತಲ್ಲೀನರಾಗುತ್ತಾರೆ. ಆ ಸಂದರ್ಭದಲ್ಲಿ ಅವರ ಸುತ್ತಲು ಹುತ್ತ ಬೆಳೆದುಕೊಂಡರೂ ಅದರ ಪರಿವಿಲ್ಲದೆ ಜಪ ಮಾಡುವುದರಲ್ಲಿ ತಮ್ಮನ್ನು ತಾವು ಮರೆತಿರುತ್ತಾರೆ. ಮುಂದೆ ಅದೇ ದಾರಿಯಲ್ಲಿ ಗುರುಗಳು ಬಂದು ವಲ್ಮಿಕದಲ್ಲಿರುವ (ಹುತ್ತಿನಲ್ಲಿರುವ) ರತ್ನಾಕರರನ್ನು ಎಚ್ಚರಗೊಳಿಸುತ್ತಾರೆ, ಆಗ ಹುತ್ತೆನ್ನುವ ಜಡತ್ವದಿಂದ ಹೊರಬಂದ ರತ್ನಾಕರ ಅವರು ವಾಲ್ಮೀಕಿಯಾಗುತ್ತಾರೆ.
ಪ್ರಪಂಚದಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ಪರಿಚಿತರಾಗಿ, ರಾಮಾಯಣಕ್ಕೆ ಒಂದು ವಿಶೇಷ ಸ್ಥಾನವನ್ನು ಒದಗಿಸಿದ ಕೀರ್ತಿ ಆದಿಕವಿ ವಾಲ್ಮೀಕಿ ಮಹರ್ಷಿ ಅವರಿಗೆ ಸಲ್ಲುತ್ತದೆ. ವಾಲ್ಮೀಕಿ ಮಹರ್ಷಿ ಅವರು ಸರ್ವತೋಮುಖ ಚಿಂತಕ, ಚರಿತ್ರೆಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಹಾಗೂ ಆದಿಕವಿಯಾಗಿ ಬಹು ವೈವಿದ್ಯಮಯವಾಗಿ ಜನರ ಮನಸೊರೆಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದಂತ ಅಮೀಮರೆಡ್ಡಿ ಹೋಸಮನಿ, ಶ್ರೀನಿವಾಸರೆಡ್ಡಿ ಪಾಟೀಲ, ಬಸವರಾಜ ಎಸ್. ಹೆಳವರ, ಶಿವಶರಣಪ್ಪ ಶಿರೂರ, ಸಾಹೇಬಣ್ಣ ದೊಡ್ಡಮನಿ, ಹಣಮಂತ್ರಾಯ ಮಾಣಸುಣಗಿ, ಮಲ್ಕಣ್ಣ ಮಾಣಸುಣಗಿ, ರಾಮಣ್ಣ ಕಾಡಮಗೇರಿ, ಭೀಮಣ್ಣ ಬೆಕಿನಾಳ, ಹಣಮಂತ ಯಡಹಳ್ಳಿ, ದನರಾಜ ಗೋಸಲ, ರವಿ ನಾಯ್ಕೋಡಿ ಮತ್ತು ಇನ್ನಿತರರಿದ್ದರು.