ಲಿಂಗಾಯತರು ದೇವೇಗೌಡರ ಕೈ ಹಿಡಿಯಲಿಲ್ಲ ಅಲ್ಲಲ್ಲ ! ದೇವೇಗೌಡರೇ ಬಸವಾದಿ ಶರಣರ ಕೈ ಹಿಡಿಯಲಿಲ್ಲ !!

0
1775

ನಮ್ಮ ರಾಜ್ಯದ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾದ ಎಚ್.ಡಿ. ದೇವೇಗೌಡರು ಇತ್ತೀಚೆಗೆ ತಮ್ಮ ಅಸಹಾಯಕತೆಯನ್ನು ಲಿಂಗಾಯತರ ಮೇಲೆ ತೋರ್ಪಡಿಕೊಂಡಿದ್ದಾರೆ. ಲಿಂಗಾಯತ ಜನಾಂಗಕ್ಕೆ ನಾನು ಸಾಕಷ್ಟು ಮಾಡಿದ್ದೇನೆ, ಆದಾಗ್ಯೂ ಅವರು ನನಗೆ ಕೈಕೊಟ್ಟರು ಎಂದು ಹಳಹಳಿಸಿದ್ದಾರೆ.

Contact Your\'s Advertisement; 9902492681

ದೇವೇಗೌಡರ ಈ ಆರೋಪ ಮೇಲ್ನೋಟಕ್ಕೆ ಸತ್ಯವೆಂದು ಅನಿಸಿದರೂ ಒಳ ನೋಟದಲ್ಲಿ ಅದು ಸಂಪೂರ್ಣ ಸುಳ್ಳು. ದೇವೇಗೌಡರು ಕಟ್ಟಿದ ಜೆಡಿಎಸ್ ಪಕ್ಷ ಜಾತ್ಯಾತೀತ ಎಂದಿದ್ದರೂ ಅದು ಜಾತಿಗೆ ಮಾತ್ರ ಸೀಮಿತವಾದ ಸಂಗತಿ ರಾಜ್ಯದ ಜನತೆ ಬಲ್ಲರು. ರಾಮಮನೋಹರ ಲೋಹಿಯಾ, ಜೆ.ಪಿ. ಹಾಗೂ ಶಾಂತವೇರಿ ಗೋಪಾಲಗೌಡರ ತತ್ವಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಪಕ್ಷ ತನ್ನ ಸಿದ್ಧಾಂತಗಳನ್ನು ಗಾಳಿಗೆ ತೂರಿದೆ.

ರಾಮ ಮನೋಹರ ಲೋಹಿಯಾರ ವೈಚಾರಿಕತೆ, ಜೆ.ಪಿ.ಯವರ ಹೋರಾಟ, ಶಾಂತವೇರಿ ಗೋಪಾಲಗೌಡರ ಸಮಾಜವಾದಿ ಸಿದ್ಧಾಂತಗಳು ಪಕ್ಷದಲ್ಲಿ ಮಣ್ಣು ಪಾಲಾಗಿವೆ. ಇಡೀ ಜಗತ್ತು ಬಸವಾದಿ ಶರಣರ ಕ್ರಾಂತಿಕಾರಿ ನಿಲುವುಗಳಿಂದ ಕರ್ನಾಟಕದತ್ತ ತಿರುಗಿ ನೋಡಿತ್ತಿದೆ. ಆದರೆ ದೇವೇಗೌಡರು ಈ ಕಡೆ ಕುತೂಹಲಕ್ಕಾಗಿಯೂ ಇಣುಕಿ ನೋಡಲಿಲ್ಲ. ವಚನಗಳು ಬಹುಶಃ ಅವರ ಗಮನಕ್ಕೂ ಬಂದಿರಲಿಕ್ಕಿಲ್ಲ. ಇದು ನಮ್ಮಗಳ ದುರಂತ. ನಮ್ಮನ್ನು ಆಳುವ ರಾಜಕೀಯ ವ್ಯಕ್ತಿಗೆ ವಚನ ಸಾಹಿತ್ಯದ, ಶರಣರ‌ ವಿಸ್ಮಯಕಾರಕ ವ್ಯಕ್ತಿತ್ವ ಪರಿಚಯವಿದ್ದರೆ ಗೌಡರು ೨೪*೭ ಬರೀ ರಾಜಕೀಯವನ್ನೆ ಮಾಡುತ್ತಿರಲಿಲ್ಲ.

ನಮ್ಮ ರಾಜ್ಯವನ್ನು ಆಳಿದ ಮತ್ತೊಬ್ಬ  ರಾಜಕಾರಣಿ ಎಸ್. ನಿಜಲಿಂಗಪ್ಪನವರಂತೆ ಸ್ಪುಟವಾದ ನಿಲುವು ಹೊಂದಿಲು ದೇವೇಗೌಡರಿಗೆ ಸಾಧ್ಯವಾಗಲಿಲ್ಲ. ಹಾಸ್ಯ ವೈಚಾರಿಕತೆಯ ವ್ಯಕ್ತಿತ್ವ ಕಟ್ಟಿಕೊಂಡಿದ್ದ ಜೆ.ಎಚ್. ಪಟೇಲರೂ ದೇವೇಗೌಡರಿಗೆ ಮಾದರಿ ಆಗಲಿಲ್ಲ. ಬದಲಾಗಿ ಕರ್ಮಠರ ಬೆನ್ನು ಬಿದ್ದರು. ಬೆಳಗ್ಗೆ ಏಳುತ್ತಲೇ ಜೋತಿಷ್ಯಿಗಳ ಮುಖ ನೋಡ ಬಯಸಿದರು. ಲಿಂಬೆ ಹಣ್ಣು ಕ್ಯಾರುಗಳು ಅವರ ಜೇಜು ತುಂಬಿದವು.

ಇದೆಲ್ಲದರ ಪರಿಣಾಮ ನಮ್ಮ ರಾಜ್ಯದ ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಮೌಢ್ಯಗಳ ಮೂಟೆಯಾಗಿದ್ದಾರೆ. ಸದಾ ದೇವರ ಗುಡಿಗೆ ಅಲೆಯುವುದೆ ಬಹು ದೊಡ್ಡ ಸಾಧನೆ ಆಗುತ್ತಿದೆ. ಹೋಮ ಹವನ, ಯಜ್ಞ ಯಾಗಗಳು ನಿತ್ಯ ಕರ್ಮವಾಗುತ್ತಿವೆ. ಮಳೆ ಬರಲು ಪರ್ಜನ್ಯ ಜಪ,ಯಜ್ಞಗಳಿಗೆ ಸರಕಾರದ ಆಜ್ಞೆ ಮಾಡುತ್ತಾರೆಂದರೆ ಇವರು ಮೌಢ್ಯದ ಹುದುಲಲ್ಲಿ ಎಷ್ಟು ಪ್ರಮಾಣದಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂಬುದು ತೋರಿಸಿಕೊಡುತ್ತಿದೆ. ಇದು ಹೀಗೆ ಮುಂದುವರೆದರೆ ಕರ್ನಾಟಕವೆ ಯಜ್ಞಕುಂಡ ಮಾಡಿ ಇಲ್ಲಿನ ಶರಣರ, ಕನಕದಾಸರ, ನಾರಾಯಣ ಗುರು, ಸರ್ವಜ್ಞರನ್ನೂ ಬಲಿಕೊಡಲು ತಯಾರಾಗಿತ್ತಾರೆ!

ನಮ್ಮ ದೇಶದ ಪ್ರಧಾನಿಯಾದ ಸಂದರ್ಭದಿಂದ ಇಲ್ಲಿಯವರೆಗೂ ಬಸವಣ್ಣನವರ ಕುರಿತು ಒಂದೇ ಒಂದು ಅಮೂಲ್ಯ ಎನ್ನುವ ಮಾತುಗಳನ್ನು ಆಡಲಿಲ್ಲ. ಆದರೆ ಈಗಿನ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರು ಬಸವಾದಿ ಶರಣರ ವಿಚಾರ ಅರಿತುಕೊಂಡು ಅಭೂತಪೂರ್ವ ನುಡಿಗಳನ್ನು ಆಡಿದರು. ಅನ್ಯ ದೇಶಕ್ಕೆ ಹೋದಾಗಲೂ ಬಸವಣ್ಣನವರನ್ನು ಅವರು ಮರೆಯಲಿಲ್ಲ. ಆದರೆ ದೇವೇಗೌಡರು ಕರ್ನಾಟದಲ್ಲಿ ಹುಟ್ಟಿ ಬೆಳೆದರೂ ಶರಣರ ಪರಿಚಯ ಮಾಡಿಕೊಳ್ಳಲಿಲ್ಲ. ಬಹುಶಃ ಶರಣರ ಬಗೆಗೆ ಪ್ರಾರ್ಥಮಿಕ ತಿಳುವಳಿಕೆಯೂ ಅವರಿಗೆ ಇರಲಿಕ್ಕಿಲ್ಲ !

ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು.

ಇರುಳು ನಾಲ್ಕುಜಾವ ವ್ಯಸನಕ್ಕೆ ಕುದಿವರು.

ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ,

ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನಾ.

ಎಂಬ ಶಿವ ಶರಣೆ ಅಕ್ಕಮಹಾದೇವಿಯವರ ವಚನದಂತೆ ತಮ್ಮ ರಾಜ್ಯದೊಳಗಿನ ಮಹಾಘನ ಮೂರ್ತಿಯಾದ ಬಸವಣ್ಣನವರನ್ನು ಅರಿತುಕೊಳ್ಳಲಿಲ್ಲ. ನಿಜಕ್ಕೂ ಬಸವ ಇವರಿಗೆ ಪರಿಚಯವಾಗಿದ್ದರೆ ಮಹಾತ್ಮ ಬುದ್ದ ಹತ್ತಿರವಾಗುತ್ತಿದ್ದ. ಡಾ.ಬಿ.ಆರ್. ಅಂಬೇಡ್ಕರ್ ಸದ್ದಿಲ್ಲದೆ ಬಂದು ಜೊತೆಯಾಗುತ್ತಿದ್ದರು. ಆಗ ಇವರ ಜಾತ್ಯಾತೀತವಾದ ಪಕ್ಷಕ್ಕೊಂದು ಖದರು ಬರುತ್ತಿತ್ತು.

ಆದರೆ ದೇವೇಗೌಡರು ವೈದಿಕತ್ವವನ್ನು ಪ್ರೀತಿಸಿದರು. ಗೌರವಿಸಿದರು. ಅವರೂ ವೈದಿಕರೆ ಆದರು. ಸುತ್ತ ಮುತ್ತ ವೈದಿಕತ್ವವೇ ಮಿಂಚಿತು. ತಮ್ಮ ಜೊತೆಗೆ ಇದ್ದೊಬ್ಬ ವೈ.ವಿ.ಎಸ್. ದತ್ತ ಎಂಬ ಶರಣ ಚಿಂತಕನನ್ನು ಬೆಳೆಸಲಿಲ್ಲ, ಬಳಸಿಕೊಂಡರು. ದತ್ತ ಅವರಿಂದಲಾದರೂ ದೇವೇಗೌಡರು ಶರಣರ ವಿಚಾರ ಅರಿತುಕೊಳ್ಳಬೇಕಿತ್ತು. ಅದೂ ಸಾಧ್ಯವಾಗಲಿಲ್ಲ.

ದೇವೇಗೌಡರು ನಮ್ಮ ದೇಶದ ಪ್ರಧಾನಿಯಾಗಿದ್ದರು ಈ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ಅವರು ಅನಿವಾರ್ಯ ಸಂಧರ್ಭದಲ್ಲಿ ಹೊರ ಹೊಮ್ಮಿದ ಪ್ರಧಾನಿ ಎಂಬುದನ್ನು ಜನ ಮರೆತಿಲ್ಲ. ಹಾಗೆಯೆ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ, ವಂಶವಾಯಿ ವಿರೋಧಿ ಅಲೆಯಲ್ಲಿ ತೇಲಿ ಬಂದವರು ಗೌಡರು. ಪ್ರಧಾನಿ, ಮುಖ್ಯ ಮಂತ್ರಿಯಾಗಿದ್ದರೂ ರಾಜ್ಯವ್ಯಾಪಿ ಅವರು ವಿಸ್ತರಿಸಿಕೊಳ್ಳಲಿಲ್ಲ ಎಂಬ ಕಟು ಮಾತನ್ನು ಆಡಲೇಬೇಕಾಗಿದೆ.

ಹೊತ್ತಾರೆ ಎದ್ದು, ಅಗ್ಫವಣಿ ಪತ್ರೆಯ ತಂದು,

ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.

ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು

ಹೊತ್ತು ಹೋಗದ ಮುನ್ನ,

ಮೃತ್ಯುವೊಯ್ಯದ ಮುನ್ನ

ತೊತ್ತುಗೆಲಸವ ಮಾಡು

ಕೂಡಲಸಂಗಮದೇವನ.

ಎಂಬ ಬಸವಣ್ಣನವರ ವಚನದಂತೆ ಶರಣರ ವಿಚಾರ ಧಾರೆ ಅಪ್ಪಿ ನಡೆದರೆ ಬರೀ ಲಿಂಗಾಯತರಲ್ಲ, ಜಾತ್ಯಾತೀತ ಮನಸ್ಸು ಇರುವ ತಳ ಸಮೂಹದ ಜನತೆ ನಿಮ್ಮ ಬೆನ್ನು ಬೀಳುತ್ತಾರೆ. ಹೋರಾಟಗಾರರು ನಿಮ್ಮ ಜೊತೆಯಾಗುತ್ತಾರೆ. ಬರಹಗಾರರು ನಿಮ್ಮೊಂದಿಗೆ ಇರುತ್ತಾರೆ. ಕನ್ನಡ ಪರ ಸಂಘಟನೆಗಳು ನಿಮ್ಮ ಜೊತೆ ಜೊತೆಗೆ ನಡೆಯುತ್ತಾರೆ.

ಆಗ ನೀವು ರಾಜಕೀಯ ಮಾಡುವ ಅವಶ್ಯಕತೆಯೆ ಬರುವುದಿಲ್ಲ.‌ ಸನ್ಯಾನ್ಯ ದೇವೇಗೌಡರೆ ನಿಮ್ಮ ಮೇಲಿನ ಪ್ರೀತಿ, ಅಭಿಮಾನಗಳಿಂದಲೆ ಬರೆದಿರುವ ಬರಹ ಓದಿ ಬದಲಾಗಿ ಜಾಗೃತ ಜನತೆಯೊಂದಿಗೆ ಹೆಜ್ಜೆ ಹಾಕಿ. ಲಿಂಬೆ ಕ್ಯಾರು, ಪೂಜೆ ಪುನಸ್ಕಾರ ಜಾಜು ತೆಗೆದಿಡಿ.

ನಮ್ಮ ಕನ್ನಡದ ಅಸ್ಮಿತೆಯನ್ನು ನೀವು ಉಳಿಸಿ, ನಿಮ್ಮೊಂದಿಗೆ ಸಾಗರೋಪಾದಿಯಲ್ಲಿ ಜನ ಸಮೂಹ ಇದ್ದೇ ಇರುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here