ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವವು ನವೆಂಬರ್ 20ರಂದು ಬೆಳಿಗ್ಗೆ 11 ಗಂಟೆಗೆ ಜ್ಞಾನಗಂಗಾ ಆವರಣದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ತಿಳಿಸಿದರು.
ಗುರುವಾರ ವಿಶ್ವವಿದ್ಯಾಲಯದ ರಾಧಾಕೃಷ್ಣ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯುದ್ದೇಶಿಸಿ ಮಾತನಾಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಗೌರವಾನ್ವಿತ ರಾಜ್ಯಪಾಲರು ಹಾಗೂ ಬೆಂಗಳೂರು ಟೆಕ್ ಸಮ್ಮಿಟ್ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಸಮ ಕುಲಾಧಿಪತಿಗಳಾದ ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ ನಾರಾಯಣ್ ಅವರು ಭಾಗವಹಿಸುತ್ತಿಲ್ಲ. ಘಟಿಕೋತ್ಸವ ಮುಖ್ಯ ಭಾಷಣಕಾರರಾದ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಸ್. ಮಾಧೇಶ್ವರನ್ ಅವರು ಆನ್‍ಲೈನ್ ಮೂಲಕ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕೋವಿಡ್-19 ಕಾರಣ ಎಲ್ಲ ಸುರಕ್ಷತೆ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯವಾಗಿದ್ದು, ಪ್ರವೇಶ ದ್ವಾರದಲ್ಲಿಯೆ ಥರ್ಮಲ್ ಸ್ಕ್ರೀನ್ ಇಡಲಾಗುತ್ತದೆ. ಅಂದಾಜು 250 ಜನರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಕುಲಪತಿಗಳು ತಿಳಿಸಿದರು.
ಘಟಿಕೋತ್ಸವ ಯಶಸ್ವಿಗೆ ಸುಮಾರು 19 ಉಪ ಸಮಿತಿಗಳನ್ನು ರಚಿಸಲಾಗಿದ್ದು, ಅಂತಿಮ ಸಿದ್ಧತೆ ನಡೆಯುತ್ತಿದೆ. ಘಟಿಕೋತ್ಸವದಲ್ಲಿ ಒಟ್ಟು 27163 ಅಭ್ಯರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, ಶುಕ್ರವಾರ 15029 ಅಭ್ಯರ್ಥಿಗಳು ಖುದ್ದು ಹಾಜರಾತಿಯೊಂದಿಗೆ ಪದವಿ ಪಡೆಯಲು ಬಯಸಿದ್ದಾರೆ. ಇದರಲ್ಲಿ 7278 ಪುರುಷ ಮತ್ತು 7751 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ.
110 ಪುರುಷ ಮತ್ತು 47 ಮಹಿಳೆಯರು ಸೇರಿದಂತೆ ಒಟ್ಟು 157 ಅಭ್ಯರ್ಥಿಗಳು ವಿವಿಧ ನಿಕಾಯ ಮತ್ತು ವಿಭಾಗದಲ್ಲಿ ಪಿಹೆಚ್‍ಡಿ ಪದವಿ ಪಡೆಯಲಿದ್ದಾರೆ. ಕಲಾ ನಿಕಾಯದಲ್ಲಿ 47, ಸಮಾಜ ವಿಜ್ಞಾನ ನಿಕಾಯದಲ್ಲಿ 44, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ 40, ವಾಣಿಜ್ಯ ಮತ್ತು ವ್ಯವಸ್ಥಾಪನಾ ನಿಕಾಯದಲ್ಲಿ 13, ಶಿಕ್ಷಣ ನಿಕಾಯದಲ್ಲಿ 08 ಹಾಗೂ ಕಾನೂನು ನಿಕಾಯದಲ್ಲಿ 05 ಅಭ್ಯರ್ಥಿಗಳು ಪಿಹೆಚ್‍ಡಿ ಪದವಿಗೆ ಭಾಜನರಾಗಿದ್ದಾರೆ.
82 ವಿದ್ಯಾರ್ಥಿಗಳಿಗೆ ಚಿನ್ನದ ಪದಕ: 38ನೇ ಘಟಿಕೋತ್ಸವದ ಸಂದರ್ಭದಲ್ಲಿ ಹೆಚ್ಚಿನ ಅಂಕ ಗಳಿಸಿದವರಿಗೆ ಒಟ್ಟಾರೆ 179 ಚಿನ್ನದ ಪದಕಗಳನ್ನು ವಿತರಿಸಲಾಗುತ್ತಿದೆ. ಇದರಲ್ಲಿ 82 ವಿದ್ಯಾರ್ಥಿಗಳಿಗೆ 175 ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದ್ದು, ಉಳಿದಂತೆ 4 ಚಿನ್ನದ ಪದಕಗಳನ್ನು ನಗದು ಬಹುಮಾನವಾಗಿ ಪರಿವರ್ತಿಸಿ 9 ಮಹಿಳಾ ಅಭ್ಯರ್ಥಿಗಳಿಗೆ ನೀಡಲಾಗುತ್ತಿದೆ.
ಮಂತ್ರಾಲಯ ಶ್ರೀ ಗಳಿಗೆ ಗೌರವ ಡಾಕ್ಟರೇಟ್: ಧಾರ್ಮಿಕ, ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೋಘ ಸೇವೆ ಪರಿಗಣಿಸಿ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಶ್ರೀ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರೊ. ಚಂದ್ರಕಾಂತ್ ಯಾತನೂರ್ ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಸಹಕರಿಸಿ: ಕೊರೋನಾ ಕಾರಣ ಘಟಿಕೋತ್ಸವ ಸರಳವಾಗಿ ಆಚರಿಸುತ್ತಿರುವುದರಿಂದ ಜನಸಂದಣಿ ಕಡಿಮೆಗೊಳಿಸುವ ಉದ್ದೇಶದಿಂದ ಸಾರ್ವಜನಿಕರು, ಗಣ್ಯ ವ್ಯಕ್ತಿಗಳು, ಪಾಲಕರು, ವಿದ್ಯಾರ್ಥಿಗಳು, ದಾನಿಗಳು, ವಿವಿ ಸಿಬ್ಬಂದಿಗಳು ಪ್ರತ್ಯಕ್ಷವಾಗಿ ಕಾರ್ಯಕ್ರಮಕ್ಕೆ ಹಾಜರಾಗದೇ ಸಹಕರಿಸಬೇಕು ಎಂದು ಕುಲಪತಿ ಪ್ರೊ. ಚಂದ್ರಕಾಂತ್ ಯಾತನೂರ್ ಅವರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಸಿ. ಸೋಮಶೇಖರ್, ಪರೀಕ್ಷಾಂಗ ಕುಲಸಚಿವ ಪ್ರೊ. ಸಂಜೀವ್‍ಕುಮಾರ್ ಕೆ. ಎಂ., ಹಣಕಾಸು ಅಧಿಕಾರಿ ಡಾ. ಬಿ. ವಿಜಯ ಇದ್ದರು.