ಕಲಬುರಗಿ : ಅಚ್ಚೆ ದಿನದ ಕನಸ್ಸನು ತೋರಿಸಿ ಅಧಿಕಾರಕ್ಕೆ ಬಂದ ಈಗಿನ ಸರ್ಕಾರವು ಮೊದಲಿಗೆ ಯಾವುದೇ ಪೂರ್ವತಯಾರಿ ಇಲ್ಲದೆ ನೋಟ್ ಬ್ಯಾನ್ ಮಾಡಿ ಜನರನ್ನು ಬೀದಿಗೆ ತಂದಿದಲ್ಲದೆ ನೂರಾರು ಸಾಮಾನ್ಯ ಜನರು ಬೀದಿ ಹೆಣವಾದರೂ ಹಾಗೂ ಲಕ್ಷಾಂತರ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳು ಮುಚ್ಚಿ ಕೋಟ್ಯಾಂತರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ಇದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಜಾರಿಗೆ ತಂದ ಅವೈಜ್ಞಾನಿಕ ಜಿ .ಎಸ್.ಟಿ ಸಾಮಾನ್ಯ ಜನರ ಬದುಕನ್ನು ಮತ್ತಷ್ಟು ದುಸ್ತರ ಮಾಡಿತು ಮತ್ತೆ ಲಕ್ಷಾಂತರ ಸಣ್ಣ ಉದ್ದಿಮೆಗಳು ಮಚ್ಚಲ್ಪಟ್ಟಿವೆ ಎಂದು ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರಕಾಂತ ಹಸರಗುಂಡಗಿ ತಿಳಿಸಿದ್ದಾರೆ.
ರೈತ ಪರ, ಕರ್ಮಿಕ ಪರವಾಗಿದ್ದ ಹಲವು ಕಾನೂನುಗಳನ್ನು ಸುಧಾರಣೆಯ ಹೆಸರಿನಲ್ಲಿ ತಿದ್ದುಪಡಿ ಇಲ್ಲವೇ,ಕಿತ್ತುಹಾಕಿ ತಮ್ಮ ಬಂಡವಾಳಶಾಹಿ ಪರವಾಗಿ ಜಾರಿಗೆ ತರಲು ಹೊರಟಿದೆ.ಇದರಿಂದ ರೈತ,ಕಾರ್ಮಿಕ, ವಿದ್ಯಾರ್ಥಿ, ಯುವಜನತೆ, ಮುಂದಿನ ದಿನಗಳಲ್ಲಿ ಹೋರಾಟದಿಂದ ಪಡೆದುಕೊಂಡಿರುವ ಸಂವಿಧಾನಿಕ ಎಲ್ಲಾ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡು ಬಂಡವಾಳಿಗರ ಗುಲಾಮರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಕೋವಿಡ್ – ೧೯ ಕೋರೊನ ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೇ ಕೇವಲ ೪ ಗಂಟೆಗಳ ಕಾಲಾವಕಾಶ ನೀಡಿ ಏರಿದ ಅವೈಜ್ಞಾನಿಕ ಲಾಕ್ ಡೌನನಿಂದ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಪಾಲಾದರೂ, ನೂರಾರು ವಲಸೆ ಕಾರ್ಮಿಕರು ಬೀದಿಯಲ್ಲೇ ಅನಾಥ ಶವವಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಮಯದಲ್ಲಿ ದುಡಿಯುವ ಜನರಿಗೆ ಯಾವುದೇ ಸೌಲಭ್ಯ ಕಲ್ಪಿಸದೆ ಬಂಡವಾಳಶಾಹಿಗಳ ಪರವಾಗಿ ೨೦ ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದರು. ಈ ಪ್ಯಾಕೇಜಿನಲ್ಲಿ ದುಡಿಯುವ ಜನರಿಗೆ ನಯಪೈಸೆ ಸಿಕ್ಕಿಲ್ಲಾ. ಬದಲಿಗೆ ಕೋಟ್ಯಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಆದಾಯಯವು ಇಲ್ಲದೇ ಉದ್ಯೋಗವು ಇಲ್ಲದೇ ಜೀವನ ನಡೆಸುವುದೇ ದುಸ್ತರವಾಗಿದೆ. ಇವೆಲ್ಲದರ ಪರಿಣಾಮ ದೇಶದ ಆರ್ಥಿಕತೆ ಕುಸಿದು ನಿರುದ್ಯೋಗದ ಪ್ರಮಾಣ ಕಳೆದ ೪೦ ವರ್ಷಗಳಲ್ಲೇ ಹೆಚ್ಚಾಗಿದೆ ಎಂದರು.
ನವೆಂಬರ್ ೨೬ ರ ಗುರುವಾರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆ ಆಹಾರ ಧಾನ್ಯ ಎತ್ತುವಳಿ ಕೆಲಸ ಬಂದ್ ಮಾಡಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರಕಾಂತ ಹಸರಗುಂಡಗಿ, ತಾಲ್ಲೂಕಾ ಅಧ್ಯಕ್ಷ ಉದಯಕುಮಾರ್ ಜೇವರ್ಗಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.