ಶಹಾಬಾದ:ತಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ಸಮಸ್ಯೆ ಹೊತ್ತು ಗ್ರಾಮಸ್ಥರು ಬಂದರೆ ಅದಕ್ಕೆ ಸ್ಪಂದಿಸಿ, ಕೂಡಲೇ ಆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಅಧ್ಯಕ್ಷೆ ಸಂಗೀತಾ ದೇವೆಂದ್ರ ಕಾರೊಳ್ಳಿ ತಾಕೀತು ಮಾಡಿದರು.
ಅವರು ಸೋಮವಾರ ನಗರದ ತಾಲೂಕಾ ಪಂಚಾಯತಿ ಕಾರ್ಯಾಲಯದಲ್ಲಿ ಪ್ರಪ್ರಥಮ ತಾಲೂಕಾ ಪಂಚಾಯತಿ ಸಾಮನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆ ನಡೆಯುತ್ತಿದ್ದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು ಬಂದಿದ್ದಾರೆಯೇ ಎಂದು ಅಧ್ಯಕ್ಷೆ ಸಂಗೀತಾ ಕಾರೊಳ್ಳಿ ಕೇಳಿ, ಸಭೆ ಪ್ರಾರಂಭಿಸಲು ಸೂಚಿಸಿದರು. ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿದ್ದಣ್ಣ ಅಣಬಿ ಅವರು ಮಾತನಾಡಿ, ಇಲಾಖೆಯಲ್ಲಿ ಕೈಗೊಂಡ ಕಾರ್ಯಗಳನ್ನು ತಿಳಿಸಿದರು.ಅದಕ್ಕೆ ಶಹಾಬಾದ ವ್ಯಾಪ್ತಿಯ ಶಾಲೆಗಳಲ್ಲಿ ಕೈತೋಟ ನಿರ್ಮಾಣ ಮಾಡಿದ್ದೀರಾ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಕೇಳಿದರು.ಚಿತ್ತಾಪೂರ ತಾಲೂಕಿನ ವ್ಯಾಪ್ತಿಯ ಶಾಲೆಗಳಲ್ಲಿ ಕೈಗೊಂಡಿದ್ದು. ಸದ್ಯ ಶಹಾಬಾದ ವ್ಯಾಪ್ತಿಯಲ್ಲಿ ಕೈಗೊಳ್ಳಲಿದ್ದೆವೆ ಎಂದು ತಿಳಿಸಿದರು.ಅಲ್ಲದೇ ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಲಾಖೆಯ ಅಧಿಕಾರಿ ಗಂಗಾಧರ ಮಾತನಾಡಿ, ಹೊನಗುಂಟಾ ಗ್ರಾಮದ ಎಸ್ಸಿ ಏರಿಯಾದಲ್ಲಿ ನೀರು ಸರಬರಾಜು ಮಾಡುವ ಕಾರ್ಯ ಪೂರ್ಣಗೊಂಡಿದೆ. ಭಂಕೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಅನುದಾನ ಸಾಕಾಗುತ್ತಿಲ್ಲ.ಆದ್ದರಿಂದ 1.75 ಲಕ್ಷ ರೂ. ಅನುದಾನ ಒದಗಿಸುವಂತೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ತಿಳಿಸಿದರು.
ಪಶು ಆಸ್ಪತ್ರೆಯ ವೈದ್ಯಾಧಿಕಾರಿ ನೀಲಕಂಠರಾವ ಪಾಟೀಲ ಮಾತನಾಡಿ, ನಮ್ಮ ಪಶು ಆಸ್ಪತ್ರೆಯ ವ್ಯಾಪ್ತಿಯಲ್ಲಿ ಸುಮಾರು 1207 ವಾರ್ಷಿಕ ಗುರಿಯನ್ನು ಹೊಂದಿದ್ದು, ಈಗಾಗಲೇ ನಾವು 97 ಶೇ ಕೃತಕ ಗರ್ಭಧಾರಣೆ ಮಾಡಲಾಗಿದೆ.ಕೊಕ್ಕರೆ ರೋಗ ಲಸಿಕೆ, ಕಾಲುಬಾಯಿ ರೋಗದ ಲಸಿಕೆ, ಗ್ರಾಮ ಸಭಾ ಸಂದರ್ಶನ,ಕಿಸಾನ ಸಂರ್ಕ ಸಭೆ ಸೇರಿದಂತೆ ಇತರ ಕಾರ್ಯಕ್ರಮಗಳು ಮಾಡಲಾಗಿದೆ ಎಂದು ಪ್ರಗತಿಯ ವರದಿ ತಿಳಿಸಿದರು.ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗಿರೀಶ ರಂಜೋಳಕರ ಪ್ರಗತಿಯ ವರದಿ ತಿಳಿಸಿದರು.
ನಂತರ ಅಂಗನವಾಡಿ ಕೇಂದ್ರಗಳಲ್ಲಿನ ಆಹಾರ ಪದಾರ್ಥಗಳು ಅರ್ಹ ಫಲಾನುಭವಿಗಳಿಗೆ ಸೇರುತ್ತಿಲ್ಲ. ಅಲ್ಲಿನ ಅಂಗನವಾಡಿ ಮೇಲ್ವಿಚಾರಕರು ಇತರ ಸಿಬ್ಬಂದಿಗಳ ಮನೆಗೆ ಹೋಗುತ್ತಿದೆ ಎಂಬ ದೂರುಗಳು ಬರುತ್ತಿದೆ.ಆದ್ದರಿಂದ ಫಲಾನುಭವಿಗಳಿಗೆ ಸರಿಯಾಗಿ ಮುಟ್ಟುವಂತೆ ಕ್ರಮಕೈಗೊಳ್ಳಬೇಕೆಂದು ಅಂಗನವಾಡಿ ಮೇಲ್ವಿಚಾರಿಕಿಯರಿಗೆ ತಿಳಿಸಿದರು.
ತಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ ಚವ್ಹಾಣ, ತಾಪಂ ಸದಸ್ಯೆ ಮೇರಾಜಬೇಗಂ ಶೇರಲಿ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.