ಕಲಬುರಗಿ: ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾದ ಪ್ರೊ. ವಲೇರಿಯನ್ ರೋಡ್ರಿಗಸ್ ವಿಶ್ರಾಂತ ಪ್ರಾಧ್ಯಾಪಕರು, ಜವಹಾರ್‌ಲಾಲ್ ನೆಹರೂ ವಿಶ್ವವಿದ್ಯಾಲಯ, ದೆಹಲಿ ಇವರು ಭಾರತ ಸಂವಿಧಾನ ರಚನೆಯ ಸ್ವರೂಪವೇ ಎಲ್ಲರನ್ನೂ ಒಳ್ಳಗೊಳ್ಳುವ ಮೌಲ್ಯವನ್ನು ಆಧರಿಸಿರುವುದರಿಂದ ಇದು ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ, ನಮ್ಮ ಸಂವಿಧಾನ ಜನರ ಆಚಾರ, ವಿಚಾರ, ಸಂಸ್ಕೃತಿ ಯಾವುದಕ್ಕೂ ಅಡ್ಡಿಪಡಿಸುವುದಿಲ್ಲ ಬದಲಾಗಿ ಅವುಗಳನ್ನು ವ್ಯಕ್ತಿ ಸ್ವಾತಂತ್ರö್ಯ ಮತ್ತು ಸಾಮುದಾಯಿಕ ಬದುಕಿಗೆ ಧಕ್ಕೆಯಾಗದ ಹಾಗೆ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಪ್ರತಿಯೊಬ್ಬ ನಾಗರಿಕರಿಗೆ ನೀಡಿದೆ, ಹಾಗೆ ಕಾಲದ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿಮಾಡಿಕೊಳ್ಳುವ ಅವಕಾಶವನ್ನು ಸಂವಿಧಾನ ಒಳಗೊಂಡಿದೆ, ಭಾರತದ ಪ್ರಜಾಪ್ರಭುತ್ವ ನಿಂತಿರುವುದು ಸಾಂವಿಧಾನಿಕ ಚೌಕಟ್ಟಿನಲ್ಲಿ ಎಂಬುದನ್ನು ಇಂದು ನಾವು ಗ್ರಹಿಸಬೇಕಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಮುಂದುವರಿದು ವರ್ತಮಾನದಲ್ಲಿ ನಮ್ಮ ಸಂವಿಧಾನ ಹಲವು ಸಾವಾಲುಗಳನ್ನು ಎದುರಿಸುತ್ತಿದೆ ಅವುಗಳಲ್ಲಿ ಬಹಳ ಮುಖ್ಯವಾದ ಸಮಸ್ಯೆ ಒಟ್ಟು ಪ್ರಜಾಪ್ರಭುತ್ವವನ್ನು ಚುನಾವಣೆಗಳಿಗೆ/ರಾಜಕೀಯ ಪಕ್ಷಗಳ ಚಟುವಟಿಗೆಳಿಗೆ ಸೀಮಿತಗೊಳಿಸಿ ವಿಶ್ಲೇಷಿಸುತ್ತಿರುವುದು ಇದು ಬಹಳ ಅಪಾಯಕಾರಿ ಬೆಳವಣಿಗೆ ಸಂವಿಧಾನದ ಮೂಲಕ ಲಭಿಸಿರುವ ಪ್ರಜಾಪ್ರಭುತ್ವ ವ್ಯಕ್ತಿ/ಪಕ್ಷ/ಧರ್ಮ/ಜಾತಿ ಎಲ್ಲವನ್ನೂ ಮೀರಿದ ಮೌಲ್ಯವಾಗಿದೆ ಎಂಬ ಅರಿವು ಯುವತಲೆಮಾರಿಗೆ ದಾಟಿಸುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ. ಬಂಜಗೆರೆ ಜಯಪ್ರಕಾಶ್ ಅವರು ಜಗತ್ತಿನ ಯಾವ ದೇಶದ ಸಂವಿಧಾನ ಕತೃಗಳು ಎದುರಿಸದ ಒಂದು ಸಮಸ್ಯೆಯನ್ನು ನಮ್ಮ ದೇಶದ ಸಂವಿಧಾನ ರಚನಾಕಾರರು ಎದುರಿಸಿದರು ಅದು ಇಲ್ಲಿನ ಜಾತಿ, ಲಿಂಗಾಧಾರಿತ ಮತ್ತು ಧಾರ್ಮಿಕ ತಾರತಮ್ಯವನ್ನು ಕಾನೂನಿನ ಮೂಲಕ ಮೀರುವ ಸವಾಲು ಇವುಗಳನ್ನು ನಿವಾರಿಸಿ ಸಮಾನತೆ ಮತ್ತು ಸಹೋದರತ್ವ ಸ್ಥಾಪಿಸದ ಹೊರತು ನಾವು ಒಂದು ದೇಶವಾಗಿ ಯಶಸ್ಸಿಯಾಗಲು ಸಾಧ್ಯವಿಲ್ಲ ಎಂಬ ಅರಿವು ಸಂವಿಧಾನ ಕತೃ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸ್ಪಷವಾಗಿ ಇತ್ತು. ಆ ಕಾರಣಕ್ಕೆ ಭಾರತ ಸಂವಿಧಾನ ಮಹಿಳೆ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಒಂದು ಕಾರ್ಯಸೂಚಿಯಾಗಿದೆ ಎಂದರು ಸಂವಿಧಾನ ಈ ಆಶಯಗಳನ್ನು ಇಂದಿನ ಯುವತಲೆಮಾರು ಪೊರೈಸುವ ಹೊಣೆಗಾರಿಕೆಯನ್ನು ನಿರ್ವಹಿಸಬೇಕಿದೆ ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಪತಿಗಳಾದ ಪ್ರೊ.ಎನ್ ನಾಗರಾಜು, ಕಲಸಚಿವರಾದ ಪ್ರೊ. ಮುಷ್ತಾಕ್ ಅಹ್ಮದ್ ಐ ಪಟೇಲ್ ಮತ್ತು ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕರಾದ ಪ್ರೊ. ಅಪ್ಪಗೆರೆ ಸೋಮಶೇಖರ್ ಮತ್ತು ಪ್ರೊ. ರೇಮ್ಯ ಅವರು ಉಪಸ್ಥಿತರಿದ್ದರು.