ವಾಡಿ: ಸ್ವದೇಶಿ ಸ್ವಾಭೀಮಾನ ಮೂಡಿಸುವ ಮೂಲಕ ಭಾರತದಲ್ಲಿ ಆಜಾದಿ ಬಚಾವೋ ಅಂದೋಲನಕ್ಕೆ ಕರೆಕೊಟ್ಟ ರಾಜೀವ್ ದಿಕ್ಷಿತ್ ಅಪ್ಪಟ ದೇಶಾಭೀಮಾನಿಯಾಗಿದ್ದರು. ಸ್ವದೇಶಿ ಹೋರಾಟದ ರಥವನ್ನು ಇಂದಿನ ದೇಶಾಭೀಮಾನಿ ಯುವಜನರು ಮುನ್ನೆಡಸಬೇಕು ಎಂದು ಪತಾಂಜಲಿ ಯೋಗ ಪೀಠದ ಶಿಕ್ಷಕ ವೀರಣ್ಣ ಯಾರಿ ಹೇಳಿದರು.
ಪಟ್ಟಣದಲ್ಲಿ ಪತಾಂಜಲಿ ಯೋಗ ಪೀಠದ ವತಿಯಿಂದ ಏರ್ಪಡಿಸಲಾಗಿದ್ದ ಸ್ವದೇಶಿ ಚಳುವಳಿ ಹಾಗೂ ಆಜಾದಿ ಬಚಾವೋ ಆಂದೋಲನದ ವಕ್ತಾರ ದಿ.ರಾಜೀವ್ ದಿಕ್ಷಿತ್ ಅವರ ೫೩ನೇ ಜನ್ಮದಿನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಕೋಕಾ-ಕೋಲಾ, ಯುನಿಲಿವರ್ ಹಾಗೂ ಕೋಲ್ಗೇಟ್ ನಂತಹ ವಿದೇಶಿ ಕಂಪನಿಗಳು ಭಾರತಕ್ಕೆ ಬಂದು ಸಂಪತ್ತು ಲೂಟಿ ಮಾಡುತ್ತಿವೆ. ದೇಶದ ಜನರ ದುಡುಮೆಯ ಹಣ ವಿದೇಶಿಗರ ಪಾಲಾಗುತ್ತಿದೆ. ಇದರಿಂದ ದೇಶದ ಉತ್ಪನ್ನಗಳ ಮೇಲೆ ಭಾರಿ ಹೊಡೆತ ಬೀಳುತ್ತಿದೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ.
ನಮ್ಮ ದೇಶದಲ್ಲಿರುವ ವಿದೇಶಿ ಕಾರ್ಖಾನೆಗಳು ನಮ್ಮ ಶ್ರಮವನ್ನು ಶೋಷಣೆ ಮಾಡುತ್ತಿವೆ. ವಿದೇಶಿ ಉತ್ಪನ್ನಗಳ ವ್ಯಾಮೋಹಕ್ಕೆ ಬಲಿಯಾದ ನಾವು ಸ್ವದೇಶಿ ಮಾರುಕಟ್ಟೆಯನ್ನು ನಷ್ಟಕ್ಕೆ ನೂಕುತ್ತಿದ್ದೇವೆ ಎಂಬುದು ರಾಜೀವ್ ದಿಕ್ಷಿತ್‌ರ ಆತಂಕವಾಗಿತ್ತು. ಪರಿಣಾಮ ದೇಶದುದ್ದಗಲಕ್ಕೂ ಸಂಚರಿಸಿ ಸ್ವದೇಶಿ ಉತ್ಪನ್ನಗಳ ಮಹತ್ವ ತಿಳಿಸಿಕೊಡಲು ಹೋರಾಟವನ್ನೇ ಕಟ್ಟಬೇಕಾಯಿತು ಎಂದು ವಿವರಿಸಿದರು.
ಪುರಸಭೆ ಸದಸ್ಯರಾದ ಭೀಮಶಾ ಜಿರೊಳ್ಳಿ, ಮುಖಂಡರಾದ ವಿ.ಕೆ.ಕೆದಿಲಾಯ, ಶಾಂತವೀರಪ್ಪ ಸಾಹು ಇಂಗಳಗಿ, ಜಯದೇವ ಜೋಗಿಕಲ್‌ಮಠ, ವಿಠ್ಠಲ ಜ್ಯೋಶಿ, ಕಾಶೀನಾಥ ಶೆಟಗಾರ, ಅರ್ಜುನ ಕಾಳೇಕರ, ಅರ್ಜುನ ದಹಿಹಂಡೆ ಪಾಲ್ಗೊಂಡಿದ್ದರು.