ಬೆಂಗಳೂರು: ಮನೆ ಮುಂದೆ ವಾಹನ ನಿಲ್ಲಿಸಿದರೂ ಶುಲ್ಕ ಕಟ್ಟಬೇಕು ಎನ್ನುವ ಪ್ರಸ್ತಾವನೆ ಸಲ್ಲಿಸಿರುವ ಬಿಬಿಎಂಪಿ ಆಯುಕ್ತರ ನಿರ್ಧಾರ ನೋಡಿದರೆ ನಾವು ಬ್ರಿಟಿಷರ ಆಡಳಿತದಲ್ಲಿ ಇದ್ದೇವೆನೋ ಎನ್ನುವ ಭಾವನೆ ಬರುತ್ತಿದೆ. ಲಗಾನ್ ಸಿನಿಮಾದ ಸಂಭಾಷಣೆ “ತೀನ್ ಗುನಾ ಲಗಾನ್ ಲಗೇಗಾ” ಈ ಸಂದರ್ಭದಲ್ಲಿ ನೆನಪಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಉಪಾಧ್ಯಕ್ಷ ಸುರೇಶ್ ರಾಥೋಡ್ ವ್ಯಂಗ್ಯವಾಡಿದರು.
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ನಗರದಲ್ಲಿ ಭಾರೀ ಪ್ರಮಾಣದಲ್ಲಿ ವಾಹನಗಳ ಪಾರ್ಕಿಂಗ್ ಹೆಚ್ಚಳ ಮಾಡಲು ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಉಸಿರಾಡುವುದಕ್ಕೂ ಬಿಬಿಎಂಪಿ ಶುಲ್ಕ ವಿಧಿಸಬಹುದು ಅಚ್ಚರಿ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ ಎನ್ನುವುದೇ ಅತ್ಯಂತ ಮೂರ್ಖತನದ ಹಾಗೂ ಅವೈಜ್ಞಾನಿಕ ನಿರ್ಧಾರ ಎಂದರು.
ಈಗಾಗಲೇ ನಗರದ ಅನೇಕ ಕಡೆ ಪಾರ್ಕಿಂಗ್ ದಂಧೆ ನಡೆಯುತ್ತಿದ್ದು ಇದನ್ನೇ ಸರಿಯಾಗಿ ನಿಭಾಯಿಸಲು ಕಷ್ಟ ಪಡುತ್ತಿರುವ ಸರ್ಕಾರ ಇನ್ನು ಇಡೀ ಬೆಂಗಳೂರನ್ನು ಸುಧಾರಿಸುವುದಕ್ಕೆ ಸಾಧ್ಯವೇ ಎಂದು ಹೇಳಿದರು.
ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಸರ್ಕಾರದ ಒಳ ಜಗಳದಿಂದ ಆಡಳಿತ ಹಳಿ ತಪ್ಪಿದೆ. ಈ ಗಮನವನ್ನು ಬೇರೆಡೆ ಸೆಳೆಯಲು ಪ್ರತಿದಿನ ಇಂತಹ ಮೂರ್ಖ ಕಾನೂನುಗಳನ್ನು ಸರ್ಕಾರ ಚರ್ಚೆಗೆ ತರುತ್ತಿದೆ ಎಂದರು. ಬೆಂಗಳೂರಿನಲ್ಲಿ 1.3 ಕೋಟಿ ಜನಸಂಖ್ಯೆ ಇದ್ದು ವಾಹನಗಳ ಸಂಖ್ಯೆಯೇ 95 ಲಕ್ಷವಿದೆ. ಈ ನಿರ್ಧಾರದಿಂದ ಹೆಚ್ಚು ತೊಂದರೆಗೆ ಒಳಗಾಗುವರು ನಗರದಲ್ಲಿರುವ ಮಧ್ಯಮ ವರ್ಗ ಹಾಗೂ ಬಡವರು. ಇವರೆಲ್ಲ ಸ್ವಂತ ವಾಹನ ಹೊಂದಬಾರದೆ ಮಾನ್ಯ ಮುಖ್ಯಮಂತ್ರಿಗಳೇ, ಹಾಗಾದರೆ ಈ ನಗರ ಕೇವಲ ದುಡ್ಡು ಇದ್ದವರಿಗೆ ಮಾತ್ರವೇ ಎಂದು ಕಿಡಿಕಾರಿದರು.
ದುಬಾರಿ ಕಾರು ಹೊಂದಿರುವ ವ್ಯಕ್ತಿ ಹಾಗೂ ಪೈಸೆಗೆ, ಪೈಸೆ ಸೇರಿಸಿ ಸ್ವಂತ ವಾಹನ ಕನಸು ಕಾಣುವ ಬಡ ನಾಗರಿಕನೂ ಬಿಬಿಎಂಪಿ ಹಾಗೂ ಸರ್ಕಾರದ ಕಣ್ಣಲ್ಲಿ ಒಂದೇ ಎನ್ನುವಂತಾಗಿದೆ. ಇದು ನಿಮ್ಮ ಕಣ್ಣಲ್ಲಿ ಸಮಾನತೆಯೇ ಎಂದರೆ ಇದೆಯೇ ಪ್ರಶ್ನಿಸಿದರು.