ಕಲಬುರಗಿ: ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಇಂದು ಆವರಾದ ಓಬಳಿ ಬೀದರ ಹೆದ್ದಾರಿ ರಸ್ತೆ ತಡೆದು ಹೊಸ ರೈತ ವಿರೋಧ ಕಾಯ್ದೆಯ ಪ್ರತಿ ಸುಟ್ಟು ಪ್ರತಿಭಟನೆ ನಡೆಸಿದರು.
ಈಗ ನಡೆಯುತ್ತಿರುವ’ದೆಹಲಿ ಹೋರಾಟ’ವನ್ನು ಕಿಸಾನ್ ಸಂಯುಕ್ತ ಮೋರ್ಚಾ ಹೆಸರಿನಲ್ಲಿ ಮತ್ತಷ್ಟು ತೀವ್ರಗೊಳಿಸಲು ಈ ಸಭೆಯು ನಿರ್ದರಿಸಿ, ಅಭೂತಪೂರ್ವ ಈ ರೈತ ಹೋರಾಟ ದೆಹಲಿ ಚಲೋ ದಲ್ಲಿ ಸುಮಾರು ಮೂರು ಲಕ್ಷ ರೈತರು ಭಾಗವಹಿಸಿದ್ದಾರೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹನನ್ ಮೊಲ್ಲಾ ತಿಳಿಸಿದ್ದಾರೆ.
ಕಾರ್ಪೊರೇಟ್ ಪರ ಮೂರು ಕೃಷಿ ಕಾಯ್ದೆಗಳನ್ನು ಹಾಗೂ ವಿದ್ಯುತ್ ಚ್ಛಕ್ತಿ ಮಸೂದೆ ಯನ್ನು ರದ್ದುಗೊಳಿಸುವ ನಮ್ಮ ಬೇಡಿಕೆಯಲ್ಲಿ ಯಾವುದೇ ಸಂಧಾನ ಇಲ್ಲ ಮತ್ತು ಈ ಕೂಡಲೇ ಈ ಬೇಡಿಕೆಯನ್ನು ಈಡೇರಿಸಿ ರೈತ ಹೋರಾಟವನ್ನು ಗೌರವಿಸಬೇಕೆಂದು ಕಿಸಾನ್ ಸಂಯುಕ್ತ ಮೋರ್ಚಾ ಲಿಖಿತವಾಗಿ, ಸರ್ಕಾರಕ್ಕೆ ತಿಳಿಸಲಿದೆ.
ಈ ಕಾಯ್ದೆಗಳ ಕುರಿತ ವಿವರವಾದ ಟೀಕೆಯನ್ನು ಬೇಡಿಕೆ ಪತ್ರದ ಜೊತೆ ಲಗತ್ತಿಸಿ ಸ್ಪಷ್ಟವಾಗಿ ಈ ಕಾಯ್ದೆಗಳ ಕಲಂವಾರು ಚರ್ಚೆಗೆ ಸಿದ್ದವಿಲ್ಲ ಎಂದು ತಿಳಿಸುವುದು, ರೈತಾಪಿ ಬೇಸಾಯದ ಕಾರ್ಪೋರೇಟೀಕರಣ ದ ವಿರುದ್ಧ ದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು , ದೇಶದಾದ್ಯಂತ ಗ್ರಾಮಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಹಾಗೂ ಕಾರ್ಪೊರೇಟ್ ದೈತ್ಯ ರಾದ ಅಂಬಾನಿ, ಅಧಾನಿ ಪ್ರತಿಕೃತಿಗಳನ್ನು ಡಿಸೆಂಬರ್ 5,2020 ರಂದು ಸುಟ್ಟು ಪ್ರತಿಭಟಿಸಲಾಗುವುದು ಹಾಗೂ ಈ ಹೋರಾಟವನ್ನು ಕಾರ್ಪೊರೇಟ್ ವಿರೋಧಿ ಹೋರಾಟವಾಗಿ ಬೆಳೆಸಲಾಗುವುದು ಎಂದು ತಿಳಿಸಿದ್ದರು.
ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ವಿಭಾಗಗಳ ಜೊತೆ ಕೈ ಜೋಡಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ತೀವ್ರಗೊಳಿಸಲಾಗುವುದು, ಈ ಮೇಲ್ಕಂಡ ತೀರ್ಮಾನಗಳನ್ನು ಪರಿಣಾಮಕಾರಿಯಾಗಿ ಎಲ್ಲಾ ಎಐಕೆಎಸ್ ಘಟಕಗಳು ಜಾರಿಗೊಳಿಸಬೇಕೆಂದು ಆಗ್ರಹಿಸಿವೆ.
ಪ್ರತಿಭಟನೆಯಲ್ಲಿ ಮಂಕುತಿಮ್ಮ, ಶಾಂತಪ್ಪ ಪಾಟೀಲ್ ಸಣ್ಣುರ್, ವಿಠ್ಠಲ್ ಪೂಜಾರಿ, ಸುನಿಲ್ ಮಾನಪಡೆ , ಸಿದ್ದಲಿಂಗ ಪಾಳಾ , ಸುಧಮ್ ಧನ್ನಿ, ಪಾಂಡುರಂಗ ಮಾವಿಂಕರ್, ಮೈಲಾರಿ ದೊಡ್ಡಮನಿ, ಬಸವರಾಜ ಮಾನಪಡೆ , ರಾಮಣ್ಣ ನಗಭುಜಂಗೆ ಶರಿದಂತೆ ಮುಂತಾದವರು ಇದ್ದರು.