ಕಲಬುರಗಿ: ದೆಹಲಿ ಚಲೋ ರೈತರು ಇದೇ ಡಿಸೆಂಬರ್ 8 ರಂದು ಕರೆ ನೀಡಿರುವ ಭಾರತ್ ಬಂದ್ ಗೆ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹಾಗೂ ಪ್ರಾಂತ ರೈತ ಸಂಘ ಸೇರಿದಂತೆ ಹಲವು ರೈತಪರ ಸಂಘಟನೆಗಳ ಬೆಂಬಲಿಸುತ್ತಿದ್ದು, ಕರ್ನಾಟಕ ಬಂದ್ ಗೆ ಜಿಲ್ಲೆಯ ಜನರು ಕೈ ಜೋಡಿಸಬೇಕೆಂದು ಸಮಿತಿಯ ರಾಜ್ಯ ಕಾರ್ಯದರ್ಶಿಯು ಬಸವರಾಜ್ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸುತ್ತಿರುವ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳು ಕಾರ್ಪೊರೇಟ್ ದಂಧೆಯವರಿಗೆ ಸಹಕಾರಿಯಾಗಿವೆ, ರೈತರನ್ನು ನಿರ್ನಾಮ ಮಾಡುವಂತಹ ಹುನ್ನಾರ ಸರ್ಕಾರ ಮಾಡುತ್ತಿವೆ, ಹೀಗಾಗಿ ಈ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಭಾರತ್ ಬಂದ್ ಗೆ ಕರೆ ನೀಡಲಾಗಿದ್ದರಿಂದ ಎಲ್ಲ ರೈತವರ್ಗದವರು ಬೆಂಬಲ ನೀಡಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಗೆ ಬೆಂಬಲಕ್ಕೆ ವ್ಯಾಪಾರಿ, ಅಂಗಡಿ ಮಾಲೀಕರನ್ನು ಆ ದಿನದಂದು ಬಂದ್ ಗೆ ಬೆಂಬಲ ನೀಡುವುದಾಗಿ ಅವರನ್ನು ಮನವಿ ಮಾಡಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಜಗದೇವಿ ಹೆಗಡೆ, ಮೌಲಾ ಮುಲ್ಲಾ, ಮಹೇಶ್ , ಅಶೋಕ್ ಕಾಂಬ್ಳೆ ಅವರು ಉಪಸ್ಥಿತರಿದ್ದರು.