ವಾಡಿ: ನೀನು ತೊಟ್ಟ ಕೋಟಿನ ಎಳೆಯಲ್ಲಿ, ನೀನು ಕುಡಿಯುವ ಎಳೆನೀರಿನಲ್ಲಿ ನಮ್ಮ ಬೆವರಿದೆ. ನೀನು ತಿನ್ನುವ ಅನ್ನ ಕಾಜೂ ಗೋಡಂಬಿಗಳಲ್ಲೂ ನಮ್ಮ ಬೇವರು ಬಸಿದ ರಕ್ತವಿದೆ… ಒಕ್ಕಲುತನವನ್ನೇ ಗುತ್ತಿಗೆ ಕೊಟ್ಟು ಒಕ್ಕಲೆಬ್ಬಿಸಲು ನೋಡಿದರೆ ಒಗ್ಗಟ್ಟಿನಡಿ ಗುಡುಗಿ ಸಿಡಿಯುತ್ತೇವೆ… ಜಲ ಫಿರಂಗಿಗೆ ಹೆದರುವುದಿಲ್ಲ ಮಳೆಯ ಆರ್ಭಟವೆಂದು ತಿಳಿದು ಮುನ್ನುಗ್ಗುತ್ತೇವೆ ನಾವು. ನೆತ್ತರು ಕುಡಿದ ನೆಲ, ಬೆಳೆದುನಿಂತ ಬೆಳೆ ಹೋರಾಟದ ಹಾಡು ಬರೆಯುತ್ತವೆ… ಬಣ್ಣಬಣ್ಣದ ಲೈಟುಗಳನ್ನು ನೋಡುತ್ತ ನಿಂತವನೇ ನಮಗೆ ಗೊತ್ತು ಬಣ್ಣ ಬದಲಾಯಿಸುವ ಮುಖ ನಿನ್ನದೆಂದು… ಹೆದ್ದಾರಿ ಹಾಸಿಗೆಯಾಗಿಸಿ ಚಳಿಯನ್ನೆ ಉಂಡು ಎದ್ದು ಬಂದೇವು ನೋಡು… ಬೇಡವೆಂದರೂ ಬೇಡಿಗಳು ಮನೆಗೆ ಬರುತ್ತವೆ ಭುಸುಗುಡೋಣ ಬನ್ನಿ…
ಹೀಗೆ ಆಳುವ ಸರಕಾರದ ವಿರುದ್ಧ ಆರ್ಭಟಿಸಿದ ಕವಿತೆಯ ಸಾಲುಗಳು, ಥರಗುಟ್ಟುವ ದಿಲ್ಲಿಯ ಚಳಿಯಲ್ಲಿ ಜೀವದ ಹಂಗು ತೊರೆದು ಹೋರಾಡುತ್ತಿರುವ ರೈತರ ದನಿಯಾಗಿ ಕವಿತೆಗಳು ಮೊಳಗಿದವು. ರವಿವಾರ ನಗರದ ಹಿಂದಿ ಪ್ರಚಾರ ಸಭಾದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ವತಿಯಿಂದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಏರ್ಪಡಿಸಲಾಗಿದ್ದ ಪ್ರತಿಭಟನಾತ್ಮಕ ಕವಿಗೋಷ್ಠಿಯಲ್ಲಿ ಕವಿಗಳು ತಮ್ಮ ಕವಿತೆಗಳ ಮೂಲಕ ಘರ್ಜಿಸಿದರು. ಕವಿಗಳಾದ ವೆಂಕಟೇಶ ಜನಾದ್ರಿ, ಮಾನು ಸಗರ, ಡಾ.ಗೀತಾ ಪಾಟೀಲ, ವಿಕ್ರಮ ತೇಜಸ್, ಸರೋಜಾದೇವಿ ನಿನ್ನೆಕರ, ಶಿಲ್ಪಾ ಜ್ಯೋಶಿ, ಸಿದ್ದಯ್ಯಶಾಸ್ತ್ರೀ ನಂದೂರಮಠ, ಮಹಾದೇವಿ ನಾಗೂರ, ಜಾನಕಿ ಗುದ್ದಿ, ತಮ್ಮಣ್ಣ ಎಚ್‌ಕೆಸಿಪಿ ಸುರಪುರ, ರವಿ ಕೋಳಕೂರ, ಮಡಿವಾಳಪ್ಪ ಹೇರೂರ ಹಾಗೂ ಮತ್ತಿತರರು ಸ್ವರಚಿತ ಕವನ ವಾಚಿಸುವ ಮೂಲಕ ಸರಕಾರದ ರೈತ ವಿರೋಧಿ ಮರಣ ಶಾಸನಗಳನ್ನು ಖಂಡಿಸಿದರು.
ಕವಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಾಹಿತಿ ಮಹಾಂತೇಶ ನವಲಕರ್, ದೇಶದಲ್ಲಿ ಇಂದು ಕರಾಳ ದಿನಗಳು ಎದುರಾಗಿವೆ. ಇವುಗಳ ವಿರುದ್ಧ ತಿರುಗಿ ಬಿದ್ದ ರೈತರು ಸರಕಾರಗಳ ಹೊಡೆತ ತಿನ್ನುತ್ತ ಹೆದ್ದಾರಿಯಲ್ಲಿ ದೃಢ ಹೆಜ್ಜೆಗಳಿನ್ನಿಟ್ಟು ಹೋರಾಡುತ್ತಿದ್ದಾರೆ. ಜಾರಿಗೆ ತರಲು ಹೊರಟಿರುವ ಹೊಸ ಕಾಯ್ದೆಗಳ ಮೂಲಕ ಕೃಷಿಯನ್ನು ಬಂಡವಾಳಶಾಹಿ ಗುತ್ತಿಗೆದಾರರಿಗೆ ಒತ್ತೆಯಿಡಲು ಸರಕಾರ ಮುಂದಾಗಿದೆ. ಅನ್ನ ಮತ್ತು ಅನ್ನದಾತರ ಮಹತ್ವ ಅರಿಯದ ಅವಿವೇಕಿ ಸರಕಾರ ವಿಷವಿಡಲು ಸಜ್ಜಾಗಿದೆ. ಎಚ್ಚೆತ್ತ ಕವಿಗಳು ಮತ್ತು ಕಲಾವಿದರು ಕಲೆ ಸಾಹಿತ್ಯದ ಮೂಲಕ ಪ್ರಸಕ್ತ ಪರಸ್ಥಿತಿಗೆ ದನಿಯಾಗಬೇಕಾದ ಅವಶ್ಯಕತೆಯಿದೆ. ಕಾವ್ಯದ ಸಾಲುಗಳು ಸರಕಾರವನ್ನು ಎಚ್ಚರಿಸುವ ಜತೆಗೆ ಜನತೆಯನ್ನು ಹೋರಾಟದ ಹಾದಿಗೆ ಬರಲು ಪ್ರೇರೇಪಿಸುವಂತಿರಬೇಕು. ಇಲ್ಲಿ ವಾಚಿಸಲ್ಪಟ್ಟ ಎಲ್ಲಾ ಕವಿತೆಗಳು ಕೇವಲ ಕವಿತೆಗಳಾಗದೆ ಜನದನಿಯಾಗಿ ಗುಡುಗಿದವು ಎಂದು ಪ್ರಸಂಶೆ ವ್ಯಕ್ತಪಡಿಸಿದರು.
ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ರಾಜ್ಯ ಕಾರ್ಯದರ್ಶಿ ಎಚ್.ವಿ.ದಿವಾಕರ, ಹೊಸ ಕೃಷಿ ನೀತಿಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರ ರೈತರ ಮರಣ ಶಾಸನ ಬರೆಯಲು ಹೊರಟಿದೆ. ಎಪಿಎಂಸಿಯನ್ನು ಬಂಡವಾಳಶಾಹಿ ಶೋಷಕರಿಗೆ ಧಾರೆಯರೆಯುತ್ತಿದೆ. ಸರಕಾರದ ವಿರುದ್ಧ ಜನತೆ ಸಂಘಟಿತವಾಗಿ ಹೋರಾಡದಿದ್ದರೆ ದುಡಿಯುವ ಜನತೆಗೆ ಉಳಿಗಾಲವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಆವಿಷ್ಕಾರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಜಿ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಫ್ರೋ.ಕಾಶಿನಾಥ ಅಂಬಲಗಿ, ಎಸ್.ವಿ.ನಿಂಗಪ್ಪ, ಪ್ರಕಾಶ ಬಿರಾದಾರ, ಫ್ರೋ.ಪ್ರತಾಪಸಿಂಗ ತಿವಾರಿ ಪಾಲ್ಗೊಂಡಿದ್ದರು. ಪ್ರೀತಿ ದೊಡ್ಡಮನಿ, ವಿಶಾಲಾಕ್ಷಿ ದೇಸಾಯಿ ಪ್ರಗತಿಪತರ ಗೀತೆಗಳನ್ನು ಹಾಡಿದರು. ಆವಿಷ್ಕಾರ ವೇದಿಕೆ ಜಿಲ್ಲಾ ಸಮಿತಿ ಸದಸ್ಯೆ ಅಶ್ವಿನಿ ನಿರೂಪಿಸಿ, ವಂದಿಸಿದರು.