ಶಿಕ್ಷಣ ಸಂಸ್ಥೆಗಳು ತಂಬಾಕು ಮುಕ್ತ ಸಂಸ್ಥೆಯನ್ನಾಗಿ ಘೋಷಿಸಬೇಕು: ಡಾ.ಶಂಕರ ವಣಿಕ್ಯಾಳ

0
23

ಕಲಬುರಗಿ: ಕೋಟ್ಪಾ ಕಾಯ್ದೆ-2003ರ ಪ್ರಕಾರ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಪರಾಧವಾಗಿದ್ದು, ನಗರ-ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತ ಸಂಸ್ಥೆಗಳನ್ನಾಗಿ ಘೋಷಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಹೇಳಿದರು.

ಗುರುವಾರ ತಮ್ಮ ಕೊಠಡಿಯಲ್ಲಿ ಜಿಲ್ಲಾ ತಂಬಾಕು ನಿಷೇಧ ಕೋಶದ ಸಭೆಯಲ್ಲಿ ಮಾತನಾಡುತ್ತಾ, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಅಧಿನಿಯಮ-2003ರ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ, ಸಾಮಥ್ರ್ಯ ಅಭಿವೃದ್ಧಿ, ಮೇಲ್ವಿಚಾರಣೆ ಕುರಿತು ತಂಬಾಕು ನಿಯಂತ್ರಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Contact Your\'s Advertisement; 9902492681

ವಿಶ್ವದಾದ್ಯಂತ ಅಂದಾಜು 60 ಲಕ್ಷಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ. ತಂಬಾಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹಲವಾರು ಕಟ್ಟುನಿಟ್ಟಿನ ಕಾಯ್ದೆಗಳನ್ನು ತಂದರು ಕೂಡ ಸಾರ್ವಜನಿಕರಿಗೆ ಇದರ ಬಗ್ಗೆ ಅರಿವೂ ಇಲ್ಲದಂತಾಗಿದ್ದು, ಹೆಚ್ಚಿನ ಅರಿವು ಮೂಡಿಸಲು ಅಧಿಕಾರಿಗಳು ಪ್ರಯತ್ನಿಸಬೇಕು ಎಂದರು.

ತಂಬಾಕು ನಿಯಂತ್ರಣ ನಿಟ್ಟಿನಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಮತ್ತು ತಹಶೀಲ್ದಾರಗಳ ನೇತೃತ್ವದಲ್ಲಿ ಪೌರ ಸಂಸ್ಥೆ, ಶಿಕ್ಷಣ, ಪೊಲೀಸ್ ಹಾಗೂ ಕಾರ್ಮಿಕರ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಸದಸ್ಯರನ್ನು ಹೊಂದಿರುವ ಸಮಿತಿಯು ತ್ರೈಮಾಸಿಕ ಸಭೆಯನ್ನು ತಾಲೂಕು ಮಟ್ಟದಲ್ಲಿ ನಡೆಸಿ ಪರಿಶೀಲನೆ ನಡೆಸಬೇಕು. ಪ್ರತಿ ಮಂಗಳವಾರ ತಂಬಾಕು ತನಿಖಾ ದಳದ ಸದಸ್ಯರೊಂದಿಗೆ ಸಭೆ ನಡೆಸಿ, ಕೋಟ್ಪಾ ಕಾಯ್ದೆ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಂಡು ದಂಡ ವಿಧಿಸುವುದಲ್ಲದೇ, ದೂರು ದಾಖಲಿಸಬೇಕು ಎಂದು ಡಾ.ಶಂಕರ ವಣಿಕ್ಯಾಳ ತಿಳಿಸಿದರು.

ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ ಉಳ್ಳಾಗಡ್ಡಿ ಮಾತನಾಡಿ ಕೋಟ್ಪಾ ಕಾಯ್ದೆ ಸೆಕ್ಷನ 4ರ ಪ್ರಕಾರ ಸಾರ್ವಜನಿಕ ಸ್ಥಳದ ಮಾಲೀಕರು 60×45 ಸೇ.ಮಿ ಇರುವ no smoking ಚಿತ್ರದ ನಾಮಫಲಕವನ್ನು ಕಡ್ಡಾಯವಾಗಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಆಹಾರ ಮಾರಾಟ ಮಾಡುವ ಅಂಗಡಿಗಳಲ್ಲಿ (ಬೇಕರಿ, ಹೋಟಲ್, ಇತ್ಯಾದಿ) ತಂಬಾಕು ಮತ್ತು ಧೂಮಪಾನ ಮಾಡುವಂತಿಲ್ಲ. ತಂಬಾಕು ಮಾರಾಟ ಮಾಡುವ ಅಂಗಡಿಗಳಲ್ಲಿ ಬೆಂಕಿಪೊಟ್ಟಣ, ಆ್ಯಷಟ್ರೀ, ಲೈಟರ್, ಮುಂತಾದ ಧೂಮಪಾನ ಇತ್ತೇಜನ ವಸ್ತುಗಳನ್ನು ಇಡುವಂತಿಲ್ಲ. ಇದನ್ನು ಉಲ್ಲಂಘಿಸಿದಲ್ಲ್ಲಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಇದಲ್ಲದೆ ಸೆಕ್ಷನ್ 6 ಪ್ರಕಾರ ತಂಬಾಕು ಉತ್ಪನ್ನಗಳು 18 ವರ್ಷದೊಳಗಿನ ಮಕ್ಕಳಿಗೆ ಮಾರಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕಾಯ್ದೆಯ ಬಗ್ಗೆ ವಿವರವಾಗಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ರಾಜಶೇಖರ ಮಾಲಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಶಿವಕುಮಾರ್ ದೇಶಮುಖ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ವಿನೋದ, ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಸಲಹೆಗಾರರಾದ ಸುಜಾತಾ ಪಾಟೀಲ್, ಡಿಇಒ ರವಿ ಎಂ., ಕಾರ್ಯಕರ್ತೆ ಆರತಿ ಎಂ., ತಾಲೂಕಿನ ವೈದ್ಯಾಧಿಕಾರಿಗಳು, ಪೌರ ಸಂಸ್ಥೆಗಳ ಮುಖ್ಯಸ್ಥರು ಮತ್ತು ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here