ಕಲಬುರಗಿ: ಕೇಂದ್ರದ ಕೃಷಿ ಕಾಯಿದೆ ವಿರೋಧಿಸಿ ಹಾಗೂ ರಾಜ್ಯದ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳವರು ನಡೆಸುತ್ತಿರುವ ಪ್ರತಿಭಟನೆ ರಾಜ್ಯ, ಕೇಂದ್ರದ ಉಭಯ ಸರ್ಕಾರಗಳ ಮೇಲಿನ ರೈತರ ನಂಬಿಕೆಯ ಕೊರತೆಗೆ ಕನ್ನಡಿ ಎಂದು ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅವರು ಸರ್ಕಾರದ ಧೋರಣೆ, ಅದರ ನಡೆಯ ಪ್ರತಿಯಾಗಿ ರೈತರಿಗೆ ಇರುವ ಸಂಕೆಗಳೇ (doubts) ಪ್ರತಿಭಟನೆ ರೂಪ ತಾಳುತ್ತಿವೆ. ಸರ್ಕಾರ ತಾನು ಮಾಡಲು ಹೊರಟಿರುವ, ಜಾರಿಗೆ ತರಲು ಮುಂದಾಗಿರುವ ನೀತಿ, ಕಾಯಿದೆಗಳ ಬಗ್ಗೆ ರೈತರಿಗೆ, ರೈತ ಸಂಘಟನೆಗಳವರಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿಲ್ಲ, ಅದರ ಫಲವೆ ಇಂದಿನ ಸರಣಿ ಪ್ರತಿಭಟನೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ರೈತರ ತಾಳ್ಮೆ ಪರೀಕ್ಷೆಗೆ ಇದು ಕಾಲವಲ್ಲ, ರೈತರ ಬೇಡಿಕೆಗಳ ಬಗ್ಗೆ ಕೇಂದ್ರ ಸಮಯಕ್ಕೆ ತಕ್ಕಂತೆ ನಿರ್ಧಾರಗಳನ್ನು ಕೈಗೊಳ್ಳಲಿ, ಇಲ್ಲದೆ ಹೋದಲ್ಲಿ ರೈತರ ಹೋರಾಟ ದೇಶವ್ಯಾಪಿ ಆಗೋದರಲ್ಲಿ ಸಂಶಯವೇ ಇಲ್ಲ. ಕೇಂದ್ರ, ರಾಜ್ಯ ಸರಕಾರಗಳು ಇನ್ನಾದರೂ ರೈತರ ಬೇಡಿಕೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿ, ರೈತರಿದ್ದರೇನೇ ದೇಶ ಇರಲಿದೆ. ರೈತರೇ ದೇಶದ ಬೆನ್ನೆಲಬು, ರೈತ ಸಮುದಾಯದ ಬಲವೃದ್ಧಿಯೇ ದೇಶದ ಬಲವೃದ್ಧಿ, ಇನ್ನಾದರೂ ತಡಮಾಡದೆ ರೈತರ ಜೊತೆ ಚರ್ಚಿಸಿ ಅವರ ಬೇಡಿಕೆಗೆ ಸರ್ಕಾರಗಳು ಸ್ಪಂದಿಸಲಿ ಎಂದು ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.