ಕಲಬುರಗಿ: ರೈತ ವಿರೋಧಿ ಎಪಿಎಂಸಿ, ಭೂ ಸುಧಾರಣಾ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ) ಬಣ ದ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷರಾದ ಸಂಪತ್ ಜೆ ಹಿರೇಮಠ ಆಗ್ರಹಿಸಿದರು
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದೆ. ಯಾವುದೇ ಚರ್ಚೆಯಿಲ್ಲದೆ ಏಕಾಏಕಿ ಕಾಯ್ದೆಗಳ ಜಾರಿಗೆ ಮುಂದಾಗಿರುವುದು ಕಾರ್ಪೊರೇಟ್ ಕಂಪನಿಗಳ ಪರ ಸರ್ಕಾರ ಇರುವುದನ್ನು ತೋರಿಸುತ್ತದೆ. ಇದರಿಂದ ರೈತರ ಭೂಮಿ ಉಳಿಯುವ ಲಕ್ಷಣವಿಲ್ಲ. ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯಿಂದ ಕೃಷಿ ಜಮೀನಿನ ಮೇಲೆ ಕಪ್ಪು ಹಣ ಹೂಡಿಕೆಯಾಗಲಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಗೆ ಬರುವಂತಾಗುತ್ತದೆ’ ಎಂದು ಆರೋಪಿಸಿದರು.
‘ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿವೆ. ಎಪಿಎಂಸಿಯ ಆಸ್ತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಸ್ಥಳೀಯ ಬಂಡವಾಳಶಾಹಿಗಳಿಗೆ ಹಂಚುವ ಹುನ್ನಾರ ನಡೆಸಲಾಗುತ್ತಿದೆ. ವಿದ್ಯುತ್ ಖಾಸಗೀಕರಣ ಮಾಡಿದರೆ ರೈತರಿಗೆ ಸಿಗುತ್ತಿರುವ ಸಬ್ಸಿಡಿ ವಿದ್ಯುತ್ ಸೌಲಭ್ಯ ನಿಲ್ಲುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಾಗಿ ರೈತರ ಮೇಲೆ ಹೊರೆ ಬೀಳುತ್ತದೆ. ಎಲ್ಲ ಕಾಯ್ದೆಗಳ ತಿದ್ದುಪಡಿ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.