ನೆರೆ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಅಧ್ಯಯನ ತಂಡ

0
86

ಕಲಬುರಗಿ: ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಸುರಿದ ದಾಖಲೆ ಮಳೆ ಮತ್ತು ಭೀಮಾ ನದಿಯ ಭೀಕರ ಪ್ರವಾಹದಿಂದ ಉಂಟಾದ ನೆರೆ ಹಾನಿ ಕುರಿತು ಅಧ್ಯಯನಕ್ಕೆ ಆಗಮಿಸಿದ ಅಂತರ ಸಚಿವಾಲಯದ ಕೇಂದ್ರ ಅಧ್ಯಯನ ತಂಡವು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಹಾನಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ಪಡೆದುಕೊಂಡರು.

ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ (ಎನ್.ಡಿ.ಎಂ.ಎ.) ರಮೇಶಕುಮಾರ ಘಂಟಾ ನೇತೃತ್ವದ ದ್ವಿ-ಸದಸ್ಯ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ನಿರ್ದೇಶಕ ಡಾ. ಭರ್ತೇಂದು ಕುಮಾರ್ ಅವರು ಅಧ್ಯಯನಕ್ಕೆ ಆಗಮಿಸಿದ್ದರು.

Contact Your\'s Advertisement; 9902492681

ಸಭೆಗೂ ಮುನ್ನ ಪ್ರವಾಹ ಪರಿಸ್ಥಿತಿಯ ನೈಜ ಚಿತ್ರಣ ತಂಡದ ಮುಂದಿಡಲು ಕೃಷಿ, ಲೋಕೋಪಯೋಗಿ, ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು, ತೋಟಗಾರಿಕೆ ಇಲಾಖೆಯಿಂದ ಹಾನಿಯಾದ ಛಾಯಾಚಿತ್ರಗಳನ್ನು ಅಧ್ಯಯನ ತಂಡಕ್ಕೆ ತೋರಿಸಲಾಯಿತು.

ತದನಂತರ ನಡೆದ ಸಭೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಜಿಲ್ಲೆಯ ಪ್ರವಾಹ ಪರಿಸ್ಥಿತಿ ವಿವರಿಸುತ್ತಾ ಜಿಲ್ಲೆಯಲ್ಲಿ ಸೆಪ್ಟೆಂಬರ್‍ನಲ್ಲಿ ವಾಡಿಕೆಗಿಂತ ಶೇ.120 ಮತ್ತು ಅಕ್ಟೋಬರ್ ನಲ್ಲಿ ಶೇ.933 ಅಧಿಕ ಮಳೆಯಾಗಿದೆ. ಇದು ವಾಡಿಕೆಗಿಂತ ಹತ್ತು ಪಟ್ಟು ಹೆಚ್ಚಳವಾಗಿದೆ. ಭೀಮಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಕಾರಣ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿನಿಂದ 5 ರಿಂದ 8 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ ನೀರು ಹರಿದಿದ್ದರಿಂದ ಭೀಮಾ ನದಿ ದಂಡೆ ಹಾಗೂ ಹಿನ್ನೀರಿನಿಂದ ಕಾಗಿಣಾ ನದಿ ದಂಡೆಯಲ್ಲಿ ಪ್ರವಾಹ ಉಂಟಾಗಿತ್ತು. ಇದುವರೆಗೆ ಸೊನ್ನ ಬ್ಯಾರೇಜಿನಿಂದ 2.80 ಲಕ್ಷ ಕ್ಯುಸೆಕ್ ಹೆಚ್ಚಿನ ಹೊರ ಹರಿವಾಗಿತ್ತು. ಆದರೆ ಕಳೆದ ಅಕ್ಟೋಬರ್ ಮಾಹೆಯಲ್ಲಿ 8 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ನದಿಗೆ ಹರಿಬಿಟ್ಟಿರುವುದು ದಾಖಲೆಯ ಪ್ರಮಾಣದಾಗಿದೆ ಎಂದರು.

ಅಕ್ಟೋಬರ್ 14ರ ಇಡೀ ರಾತ್ರಿ ಮಳೆ ಸುರಿದ ಕಾರಣ ಬೆಳೆ ನಾಶಕ್ಕೆ ಕಾರಣವಾಗಿದೆ. ಭೀಕರ ಮಳೆಯ ಮುನ್ಸೂಚನೆ ಅರಿತು ರಾತ್ರೋರಾತ್ರಿ ಅಧಿಕಾರಿಗಳ ಸಭೆ ನಡೆಸಿ ಮುಖ್ಯವಾಗಿ ಭೀಮಾ ನದಿ ದಂಡೆಯ ಗ್ರಾಮಸ್ಥರನ್ನು ಸುರಕ್ಷಿತವಾಗಿ ಸ್ಥಳಾಂತರಕ್ಕೆ ಆದ್ಯತೆ ನೀಡಿ ಪ್ರತಿ 4-5 ಗ್ರಾಮಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ ಅವರೊಂದಿಗೆ ವಾಹನ ಮತ್ತು ಅಂಬುಲೆನ್ಸ್ ಕಳುಹಿಸಲಾಯಿತು. ಗ್ರಾಮಗಳಲ್ಲಿ ಮೈಕ್ ಮತ್ತು ಡಂಗೂರ ಬಾರಿಸಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಮಾನವ ಹಾನಿಗೆ ತಡೆಯಲಾಯಿತು ಎಂದರು.

ಭೀಮಾ ನದಿಯ ಪ್ರವಾಹದ ಹಿನ್ನೆಲೆಯಲ್ಲಿ 11 ಪೂರ್ಣ ಗ್ರಾಮಗಳು ಸೇರಿದಂತೆ 92 ಜಲಾವೃತಗೊಂಡ ಗ್ರಾಮಗಳ 27809 ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಗ್ರಾಮಗಳು ನಡುಗಡ್ಡೆಯಾಗಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ 98 ಸದಸ್ಯರ ಸೇನಾ ಪಡೆ, 73 ಸದಸ್ಯರ 3 ಎನ್.ಡಿ.ಆರ್.ಎಫ್. ತಂಡಗಳು, 75 ಸದಸ್ಯರ ಅಗ್ನಿಶಾಮಕ ದಳದ ತಂಡಗಳು, 101 ಸದಸ್ಯರ ತಜ್ಞ ಈಜುಗಾರರ ತಂಡ ಹಗಲಿರುಳು ರಕ್ಷಣಾ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಿ 2890 ಜನರನ್ನು ರಕ್ಷಿಸಿ ಕಾಳಜಿ ಕೇಂದ್ರಕ್ಕೆ ರವಾನಿಸಲಾಯಿತು.

ಸಂತ್ರಸ್ತರಿಗಾಗಿ ಜಿಲ್ಲೆಯಲ್ಲಿ 163 ಕಾಳಜಿ ಕೇಂದ್ರ ತೆಗೆದು 6234 ಕುಟುಂಬಗಳ 36691 ಜನರಿಗೆ ಆಶ್ರಯ ಕಲ್ಪಿಸಿ ಕೋವಿಡ್-19 ಸುರಕ್ಷತಾ ಕ್ರಮದೊಂದಿಗೆ ಊಟೋಪಚಾರದ ಜೊತೆಗೆ ಅಗತ್ಯ ಮೂಲಸೌಲಭ್ಯಗಳನ್ಬು ನೀಡಲಾಗಿದೆ. 3542 ಮನೆಗಳು ಭಾಗಶ: ಹಾನಿಯಾದರೆ 13055 ಮನೆಗಳ ಬಟ್ಟೆ, ಇತರೆ ಸಾಮಗ್ರಿಗಳು ಪ್ರವಾಹಕ್ಕೆ ತುತ್ತಾಗಿವೆ. ಜಿಲ್ಲೆಯಲ್ಲಿ ಯಾವುದೇ ಮಾನವ ಹಾನಿಯಾಗಿಲ್ಲ, ಆದರೆ ಪಶು-ಪಕ್ಷಿಗಳು ಸೇರಿದಂತೆ 904 ಜಾನುವಾರಗಳ ಜೀವ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

154696 ಹೆಕ್ಟೇರ್ ಕೃಷಿ ಮತ್ತು 2492 ಹೆಕ್ಟೇರ್ ತೋಟಗಾರಿಕೆ ಪ್ರದೇಶ ಹಾನಿಗೆ 15698.70 ಲಕ್ಷ ರೂ. ಅಂದಾಜು ಹಾನಿ ಗುರುತಿಸಿದೆ. ರಸ್ತೆ, ಸೇತುವೆ, ಕೆರೆ, ಕಾಲುವೆ, ವಿದ್ಯುತ್ ಕಂಬ ದುರಸ್ತಿ, ಕುಡಿಯುವ ನೀರಿನ ಘಟಕಗಳು, ಪಶು-ಪ್ರಾಣಿ ಜೀವ ಹಾನಿಗೆ ಒಟ್ಟಾರೆ 40092.73 ಲಕ್ಷ ರೂ. ಮೊತ್ತದ ಹಾನಿಯಾಗಿದೆ. ಭಾಗಶ ಮನೆ ಹಾನಿ, ಮನೆಯಲ್ಲಿ ಸಾಮಗ್ರಿಗಳು ನೀರಿಗೆ ಕೊಚ್ಚಿಕೊಂಡು ಹೋಗಿದ್ದು, ಅಂಗನವಾಡಿ ಮತ್ತು ಸರ್ಕಾರಿ ಕಟ್ಟಡಗಳ ಹಾನಿಯನ್ನು 8798.55 ಲಕ್ಷ ರೂ. ಗುರುತಿಸಿದೆ. ಕಲಬುರಗಿ ನಗರದಲ್ಲಿನ ರಸ್ತೆ ಹಾನಿಗೆ 8246 ಲಕ್ಷ ರೂ. ಅಂದಾಜು ಮಾಡಲಾಗಿ ಒಟ್ಟಾರೆ ಪ್ರವಾಹದಿಂದ ಜಿಲ್ಲೆಯಲ್ಲಿ 72835.98 ಲಕ್ಷ ರೂ. ಹಾನಿಯಾಗಿದೆ ಎಂದು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.

ಕೇಂದ್ರ ಅಧ್ಯಯನ ತಂಡದೊಂದಿಗೆ ಆಗಮಿಸಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ ರಾಜನ್ ಅವರು ಮಾತನಾಡಿ, ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಭೀಮಾ ನದಿಗೆ ಹರಿಬಿಟ್ಟಿರುವುದರಿಂದ ಭೀಕರ ಪ್ರವಾಹ ನಿಯಂತ್ರಣ ಜಿಲ್ಲೆಗೆ ಸವಾಲಾಗಿತ್ತು. ರಾಜ್ಯ ಸರ್ಕಾರವು ಜಿಲ್ಲಾಡಳಿತದೊಂದಿಗೆ 24 ಗಂಟೆ ನಿರಂತರ ಸಮನ್ವಯ ಸಾಧಿಸಿದ ಪರಿಣಾಮ ಯಾವದೇ ಮಾನವ ಹಾನಿಯಾಗಿಲ್ಲ. ನೆರೆಯಲ್ಲಿ ಸಿಲುಕಿದವರ ರಕ್ಷಣೆಗೆ ದೂರದ ಉಡುಪಿ, ಕಾರವಾರದಿಂದ ರಾತ್ರೋರಾತ್ರಿ ಬೋಟ್ ತರಿಸಲಾಯಿತು. ಅಗತ್ಯಬಿದ್ದಲ್ಲಿ ಸಂತ್ರಸ್ತರ ರಕ್ಷಣೆಗೆಂದೇ ಬೀದರ ವಾಯು ನಿಲ್ದಾಣದಲ್ಲಿ ಹೆಲಿಕಾಫ್ಟರ್ ಬಳಕೆಗೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬಟ್ಟೆ-ಬರೆಗಳನ್ನು ಕಳೆದುಕೊಂಡವರಿಗೆ ತಲಾ 10 ಸಾವಿರ ರೂ. ಪರಿಹಾರ ಧನ ನೀಡಲಾಗಿದೆ ಎಂದರು.

ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ (ಎನ್.ಡಿ.ಎಂ.ಎ.) ರಮೇಶಕುಮಾರ ಘಂಟಾ ಅವರು ಯಾವ ವಲಯದಲ್ಲಿ ಎಷ್ಟು ಪ್ರಮಾಣದ ಹಾನಿಯಾಗಿದೆ, ಇದನ್ನು ಪುನರ್ ನಿರ್ಮಾಣಕ್ಕೆ ತಗಲುವ ವೆಚ್ಚ ಸೇರಿದಂತೆ ಸಮಗ್ರ ಮಾಹಿತಿಯನ್ನು ಸಂಜೆಯೊಳಗೆ ನೀಡಬೇಕು ಎಂದರು. ಇನ್ನೋರ್ವ ತಂಡದ ಸದಸ್ಯ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ನಿರ್ದೇಶಕ ಡಾ. ಭರ್ತೇಂದು ಕುಮಾರ್ ಮಾತನಾಡಿ ಪ್ರವಾಹದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ತೆಗೆದುಕೊಂಡ ಕ್ರಮ ಮತ್ತು ಖರ್ಚಿನ ವಿವರದ ಬಗ್ಗೆ ಪ್ರತಿಯೊಂದು ಅಂಕಿ-ಸಂಖ್ಯೆಯೊಂದಿಗೆ ಮಾಹಿತಿ ನೀಡಬೇಕು ಮತ್ತು ಇದೇ ರೀತಿಯ ಈ ಹಿಂದಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣ ಮತ್ತು ಫಲಾನುಭವಿಗಳಿಗೆ ನೀಡಿದ ಪರಿಹಾರದ ಮೊತ್ತದ ಬಗ್ಗೆಯೂ ಮಾಹಿತಿ ನೀಡುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ನೀರಾವರಿ, ಜೆಸ್ಕಾಂ, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳು ಹಾನಿಯಾದ ವಿವರವನ್ನು ಪ್ರತ್ಯೇಕವಾಗಿ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಪಿ.ರಾಜಾ, ಜೆಸ್ಕಾಂ ಎಂ.ಡಿ. ರಾಹುಲ ಪಾಂಡ್ವೆ, ಡಿ.ಸಿ.ಪಿ. ಕಿಶೋರ ಬಾಬು, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಐ.ಎ.ಎಸ್.ಪ್ರೊಬೇಷನರ್ ಅಧಿಕಾರಿ ಡಾ.ಆಕಾಶ ಶಂಕರ ಸೇರಿದಂತೆ ಸಹಾಯಕ ಆಯುಕ್ತರು, ತಾಲೂಕಿನ ತಹಶೀಲ್ದಾರರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here