ನೀತಿ ನೈತಿಕತೆ ಬೋಧಿಸಿದಾತನೇ ನಿಜವಾದ ಗುರು: ವೀರಭದ್ರಪ್ಪ ಆರ್.ಕೆ

0
68

ವಾಡಿ: ಶಿಕ್ಷಣದ ಜತೆಗೆ ಬದುಕಿನ ನೀತಿ ನೈತಿಕತೆಯ ಮೌಲ್ಯಗಳನ್ನು ಬೋಧಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವಾತನೇ ನಿಜವಾದ ಗುರು. ಸಮಾಜಕ್ಕಾಗಿ ಸಮಯ ಮೀಸಲಿಡುವ ಶಿಕ್ಷಕರು ನಿಜಕ್ಕೂ ಅಭಿನಂದನಾರ್ಹರು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕ ವೀರಭದ್ರಪ್ಪ ಆರ್.ಕೆ ಹೇಳಿದರು.

ಪಟ್ಟಣದ ಚಕ್ರವರ್ತಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಇತ್ತೀಚೆಗೆ ನಿಧನರಾದ ಹಿರಿಯ ಶಿಕ್ಷಣ ಪ್ರೇಮಿ, ನಿವೃತ್ತ ಶಿಕ್ಷಣ ಸಂಯೋಜಕ, ಕಣ್ವಶಿಲಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೊಳ್ಳಪ್ಪ ಸಿಂಧಗೀಕರ ಅವರ ಶ್ರದ್ಧಾಂಜಲಿ ಸಭೆ ಹಾಗೂ ಗುರುವಂದನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಕೆಟ್ಟುಹೋಗಿರುವ ಈ ಸಮಾಜವನ್ನು ತಿದ್ದುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕನ ಮೇಲಿದೆ. ವಿದ್ಯಾರ್ಥಿ ಯುವಜನರನ್ನು ದೇಶದ ಶಕ್ತಿಯಾಗಿ ರೂಪಿಸವ ಅಗತ್ಯವಿದೆ. ವೈಕ್ತಿಕ ಬದುಕು ತ್ಯಾಗ ಮಾಡಿ ಸಮಾಜದ ಹಿತಾಸಕ್ತಿಗಾಗಿ ಬದುಕುವ ಶಿಕ್ಷಕರು ಇತರರಿಗೆ ಆದರ್ಶವಾಗುತ್ತಾರೆ. ಕೊಳ್ಳಪ್ಪ ಸಿಂಧಗೀಕರ ಅವರು ಬದುಕಿನುದ್ದಕ್ಕೂ ಶಿಕ್ಷಣರಂಗದಲ್ಲಿದ್ದು ಸಾವಿರಾರು ಮಕ್ಕಳ ಭವಿಷ್ಯ ಬರೆದಿದ್ದಾರೆ. ಸರಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಮೂಲಕ ಎರಡು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಶಿಕ್ಷಣದ ಪ್ರಾಮುಖ್ಯತೆ ಅರ್ಥ ಮಾಡಿಕೊಂಡು ಅಕ್ಷರ ದಾಸೋಹ ಮಾಡಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ ಹಿರಿಯರಾದ ದಿ.ಕೊಳ್ಳಪ್ಪ ಅವರು ಹುಟ್ಟಿದ್ದು ಭೋವಿ ಸಮುದಾಯದಲ್ಲಾದರೂ ಅವರು ಬದುಕಿದ್ದು ವೀರಶೈವ ಸಮಾಜದಲ್ಲಿ. ಅವರು ಯಾವತ್ತೂ ಯಾರನ್ನೂ ಜಾತಿಯಿಂದ ನೋಡಿದವರಲ್ಲ. ಪ್ರೀತಿಯಿಂದ ಮಾತನಾಡಿಸುತ್ತಿದ್ದ ಶಿಕ್ಷಣ ಪ್ರೇಮಿಯಾಗಿದ್ದರು. ಅವರ ಅಗಲಿಕೆ ಅಸಂಖ್ಯಾತ ಶಿಷ್ಯ ಬಳಗಕ್ಕೆ ನೋವು ತಂದಿದೆ ಎಂದರು.

ಶಿಕ್ಷಕ ಅಶೋಕ ಚಕ್ರವರ್ತಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಅಬ್ದುಲ್ ಸಲಿಂ, ಅಮೃತ ಕೋಮಟೆ, ಲಕ್ಷ್ಮಣ, ಸುಮಂಗಲಾ, ಸುಮಂಗಲಾ ಸಿಂಧಗೀಕರ, ಪತ್ರಕರ್ತ ಮಡಿವಾಳಪ್ಪ ಹೇರೂರ, ಹಳೆಯ ವಿದ್ಯಾರ್ಥಿ ಬಳಗದ ಮರಲಿಂಗ ಪೂಜಾರಿ, ಶರಬಣ್ಣ ಪೂಜಾರಿ, ಶಶಿಕಾಂತ ಹುಗ್ಗಿ, ಪರಶುರಾಮ, ಮಲ್ಲಿಕಾರ್ಜುನ, ಕಾಸಿಂಬಿ ಸೇರಿದಂತೆ ನೂರಾರು ಜನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಶರಣಮ್ಮ ನಿರೂಪಿಸಿದರು. ಶ್ರೀಕಾಂತ ಬಿರಾಳ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here