ದೇಶಾಂಶ ಪತ್ನಿಗೆ ಬೀದರಿನಲ್ಲಿ ‘ಅಮ್ಮ ಗೌರವ’ ಪ್ರದಾನ

0
186

ಬೀದರ್: ‘ಬೀದರ್ ಶಬ್ದಕೋಶ’ದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ ನಾಡಿನ ಹಿರಿಯ ಲೇಖಕರಾಗಿದ್ದ ದೇಶಾಂಶ ಹುಡಗಿ ಅವರ ನಿಧನದ ಹಿನ್ನೆಲೆಯಲ್ಲಿ ಬೀದರ ನೆಲದ ಚಿಟ್ಟಾವಾಡಿಯಲ್ಲಿರುವ ‘ಜಯಶಂಕರ’ ಮನೆಯಲ್ಲಿ ‘ಅಮ್ಮ ಗೌರವ’ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.

ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ ‘ಅಮ್ಮ ಪ್ರಶಸ್ತಿ-೨೦’ನೇ ಸಾಲಿನ ಅಮ್ಮ ಗೌರವ ಪುರಸ್ಕಾರಕ್ಕೆ ಹಿರಿಯ ಸಾಹಿತಿ ದೇಶಾಂಶ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ನ.೨೫ ರಂದು ಅವರ ನಿಧನರಾದ ಹಿನ್ನೆಲೆಯಲ್ಲಿ, ಬೀದರಿನ ಚಿಟ್ಟಾವಾಡಿಯಲ್ಲಿರುವ ಅವರ ಮನೆಯಲ್ಲಿ, ದೇಶಾಂಶ ಹುಡಗಿ ಅವರ ಪತ್ನಿ ಶ್ರೀಮತಿ ಮಹಾದೇವಮ್ಮ ಹುಡಗಿ ಅವರಿಗೆ ಅಮ್ಮ ಗೌರವ ಪ್ರದಾನ ಮಾಡಲಾಯಿತು. ಶಾಲು ಸತ್ಕಾರ, ಅಭಿನಂದನಾ ಪತ್ರ, ಫಲಪುಷ್ಪಗಳೊಂದಿಗೆ, ತೊಗರಿ ಬೇಳೆ ಮತ್ತು ಸೀರೆಯನ್ನು ಕಾಣಿಕೆಯಾಗಿ ನೀಡಿ ಗೌರವಿಸಲಾಯಿತು.

Contact Your\'s Advertisement; 9902492681

ಅಮ್ಮ ಗೌರವ ಪ್ರದಾನ ಮಾಡಿದ ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ ಮಾತನಾಡಿ, ಧರಿನಾಡಿಗೆ ಕೀರ್ತಿಯನ್ನು ತಂದ ದೇಶಾಂಶ ಹುಡಗಿ ಅವರನ್ನು ಹುಡುಕಿಕೊಂಡು ಬಂದ ಅಮ್ಮ ಪ್ರಶಸ್ತಿಯ ಗೌರವ ಪುರಸ್ಕಾರದ ಆಯ್ಕೆ ಸಮಿತಿಯು ಅತ್ಯುತ್ತಮರನ್ನು ಆಯ್ಕೆ ಮಾಡಿದೆ. ಸಾಹಿತಿಗಳನ್ನು ಬೆಳೆಸುವಲ್ಲಿ ಅಹರ್ನಿಶಿ ಶ್ರಮಿಸಿದ ದೇಶಾಂಶ ಹುಡಗಿ ಅವರ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೇಶಾಂಶ ಹುಡಗಿ ಅವರದು ವಿಶಿಷ್ಟ ಹೆಸರು. ಕೆಂಪು ನೆಲದ ಈ ಧರಿನಾಡಿನಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಬೀದರ್ ಎಂಬ ಹೆಸರು ಪ್ರಸ್ತಾಪವಾದಗಲೆಲ್ಲ ದೇಶಾಂಶ ಅವರ ಹೆಸರು ನೆನಪಿಗೆ ಬರುತ್ತದೆ ಎಂದು ಅಭಿಮಾನದಿಂದ ಅವರು ಹೇಳಿದರು.

ಈ ಸಂದರ್ಭದಲ್ಲಿ ಅಮ್ಮ ಪ್ರಶಸ್ತಿ ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ಕಳೆದ ೨೦ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮನೆಗೆ ತೆರಳಿ ಅಮ್ಮ ಪುರಸ್ಕಾರವನ್ನು ನೀಡಲಾಗುತ್ತಿದೆ. ಸಂಭ್ರಮ ಪಡಬೇಕಾದ ವ್ಯಕ್ತಿತ್ವದ ಅಗಲಿಕೆಯ ನಡುವೆಯೂ ದೇಶಾಂಶ ಅವರ ಬೆನ್ನ ಹಿಂದಿನ ಬೆಳಕಂತೆ ಜೀವನವನ್ನು ಸವೆಸಿದ ಶ್ರೀಮತಿ ಮಹಾದೇವಮ್ಮ ದೇಶಾಂಶ ಅವರನ್ನು ಸತ್ಕರಿಸುವ ಮೂಲಕ ಆ ಹಿರಿಯ ಚೇತನಕ್ಕೆ ನೆನಪು ಮಾಡಿಕೊಂಡಂತಾಯಿತು ಎಂದು ಹೇಳಿದರು.

ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ, ಹಿರಿಯ ಲೇಖಕಿ ಜಗದೇವಿ ದುಬಲಗುಂಡಿ, ಗಜಲ್ ಕವಯಿತ್ರಿ ಪ್ರೇಮಾ ಹೂಗಾರ, ವಿಜಯಲಕ್ಷ್ಮೀ ಸುಜೀತಕುಮಾರ, ಯುವ ಕವಿ ವಿಜಯಭಾಸ್ಕರರೆಡ್ಡಿ , ಮಹಾದೇವರೆಡ್ಡಿ, ದೇಶಾಂಶ ಹುಡಗಿ ಅವರ ಪುತ್ರ ಬಸವರಾಜ, ಪುತ್ರಿ ಕನ್ಯಾಕುಮಾರಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here