ಕಲಬುರಗಿ : ಕರ್ನಾಟಕ ಯುವ ಮುನ್ನಡೆ, ಕುಲಬುರಗಿ ಜಿಲ್ಲಾ ಸಮಿತಿ ವತಿಯಿಂದ ರಾಜ್ಯದಲ್ಲಿ ‘ಯುವಜನ ಸಬಲೀಕರಣ ನಿಗಮ’ ಸ್ಥಾಪಿಸುವಂತೆ ಕಲಬುರಗಿ ಜಿಲ್ಲಾಧಿಕಾರಿಗಳ ಮತ್ತು ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಸರಕಾರ ಧರ್ಮ, ಜಾತಿ, ಪ್ರದೇಶ ಆಧಾರದಲ್ಲಿ ಅನೇಕ ನಿಗಮ ಹಾಗೂ ಪ್ರಾಧಿಕಾರಗಳನ್ನು ರಚಿಸುತ್ತಿದೆ. ಇಂತಹ ನಿಗಮಗಳಿಂದ ಸಮಾಜದ ಉಳ್ಳವರಿಗೆ ಕೆಲವರಿಗೆ ಮಾತ್ರ ಉಪಯೋಗವಾಗುತ್ತಿದ್ದು, ಮಧ್ಯಮ ಮತ್ತು ಕೆಳ ವರ್ಗದ ಯುವಜನರಿಗೆ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ. ಆದ್ದರಿಂದ ಯುವಜನರ ಸಬಲೀಕರಣಕ್ಕೆ ಯುವಜನ ನಿಗಮ ಸ್ಥಾಪಿಸುವ ಅಗತ್ಯ ಇಂದು ಎದ್ದು ಕಾಣುತ್ತಿದೆ.
ರಾಜ್ಯದಲ್ಲಿ ಸುಮಾರು 2 ಕೋಟಿ ಯುವಜನರಿದ್ದಾರೆ. ಅವರೆಲ್ಲಾ ಸಬಲೀಕರಣಗೊಂಡರೆ ರಾಜ್ಯಕ್ಕೆ ಮತ್ತು ದೇಶಕ್ಕೆ ಮುಂದಿನ ದಿನಗಳಲ್ಲಿ ಸಕಾರಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಯುವಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿ ಕರ್ನಾಟಕ ಯುವ ಮುನ್ನಡೆ, ಕಲಬುರಗಿ ಜಿಲ್ಲಾ ಸಮಿತಿ ಮನವಿಯೊಂದನ್ನು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಯುವಮುನ್ನಡೆ ಜಿಲ್ಲಾ ಸಮಿತಿ ಸಂಚಾಲಕರಾದ ನಂದಿನಿ ಕೊಳ್ಳದ, ಸಹಸದಸ್ಯರಾದ ಬಿನಿತಾ, ಮಧುಸೂದನ್, ರೇಣುಕಾ ಹನ್ನುರ, ರೇವತಿ ಮ್ಯಾಗೇರಿ, ರೇಣುಕಾ ಹುನಚಗೇರಿ, ರಮಾ ದೊಡ್ಮನಿ, ನೇಹಾ, ಸವಿತಾ, ಸಾಬಮ್ಮ, ಪೂಜಾ ಮತ್ತಿತರರು ಇದ್ದರು.