ಕಲಬುರಗಿ: ಗ್ರಾಮ ಪಂಚಾಯಿತಿಯ ಸಾರ್ವತ್ರಿಕ-2020ರ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಆರು ತಾಲೂಕುಗಳಲ್ಲಿ ಮೊದಲನೇ ಹಂತದ ಮತದಾನವು ಮಂಗಳವಾರ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ.74.86 ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜೋತ್ಸ್ನಾ ಅವರು ತಿಳಿಸಿದ್ದಾರೆ.
ಕಲಬುರಗಿ ತಾಲೂಕು ಶೇ. 76.39 ರಷ್ಟು, ಆಳಂದ ಶೇ.75.12 ರಷ್ಟು, ಅಫಜಲಪುರ ಶೇ.77.09ರಷ್ಟು, ಕಮಲಾಪುರ ಶೇ.72.96ರಷ್ಟು, ಕಾಳಗಿ ಶೇ.72.57 ರಷ್ಟು ಹಾಗೂ ಶಹಾಬಾದ ಶೇ.63.34 ರಷ್ಟು ಮತದಾನವಾಗಿದೆ.
ಮತ ಚಲಾಯಿಸುವ ಹಕ್ಕು ಹೊಂದಿದ ಒಟ್ಟು 7,02,909 ಮತದಾರರ ಪೈಕಿ 5,26,188 ಮತದಾರರು ಮತ ಚಲಾಯಿಸಿದ್ದು, ಇದರಲ್ಲಿ 2,74,132 ಪುರುಷರು ಹಾಗೂ 2,52,056 ಮಹಿಳಾ ಮತದಾರರು ಇದ್ದಾರೆ. ಮೊದಲ ಹಂತದಲ್ಲಿ ಒಟ್ಟು 126 ಗ್ರಾಮ ಪಂಚಾಯಿತಿಗಳ 961 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.