ಶಹಾಬಾದ:ತಾಲೂಕಿನ ನಾಲ್ಕು ಗ್ರಾಪಂಗಳ 79 ಸ್ಥಾನಗಳಿಗೆ ಸ್ಪರ್ಧೆ ಮಾಡಿದ 249 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಮತ ಪೆಟ್ಟಿಗೆಯಲ್ಲಿ ಹಾಕಿದ್ದು, ಪೊಲೀಸ್ ಬಂದೋಬಸ್ತನಲ್ಲಿ ಸ್ಟ್ರಾಂಗ್ ರೂಮನಲ್ಲಿ ಮತ ಪೆಟ್ಟಿಗೆಗಳು ಭದ್ರವಾಗಿವೆ.
ಮತದಾನದ ನಂತರ ಮತಕೇಂದ್ರಗಳಿಂದ ತರಲಾದ ಮತಪೆಟ್ಟಿಗೆಗಳನ್ನು ನಗರದ ಗಂಗಮ್ಮ ಶಾಲೆಯ ಭದ್ರತಾ ಕೊಠಡಿಯಲ್ಲಿ ಇಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ತಾಲೂಕಿನ ಭಂಕೂರ, ಮರತೂರ, ತೊನಸನಹಳ್ಳಿ(ಎಸ್) ಹಾಗೂ ಹೊನಗುಂಟಾ ಗ್ರಾಪಂಗಳ ಮತಕೇಂದ್ರದಲ್ಲಿ ಮಂಗಳವಾರ ಮತದಾನ ಮುಕ್ತಾಯದ ನಂತರ ತಡರಾತ್ರಿವರೆಗೂ ಶಾಲೆಯಲ್ಲಿ ನಿಗದಿಪಡಿಸಲಾದ ಡಿ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಪೆಟ್ಟಿಗೆಗಳನ್ನು ಹಾಗೂ ಸಂಬಂಧಿಸಿದ ದಾಖಲೆಗಳನ್ನು ಪಡೆಯಲಾಯಿತು.ನಂತರ ಎಲ್ಲಾ ಮತಪೆಟ್ಟಿಗೆ ಹಾಗೂ ದಾಖಲೆಗಳನ್ನು ತಹಸೀಲ್ದಾರ ಸುರೇಶ ವರ್ಮಾ ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಚಿತ್ರೀಕರಿಸಿ ಸ್ಟ್ರಾಂಗ್ ರೂಮ್ನಲ್ಲಿ ಇಟ್ಟು, ಕೊಠಡಿಯನ್ನು ಸಂಪೂರ್ಣ ಸೀಲ್ ಮಾಡಲಾಗಿದೆ. ಮತ ಎಣಿಕೆ ದಿನಾಂಕದವರೆಗೆ ಸ್ಟ್ರಾಂಗ್ ರೂಮ್ ಕಟ್ಟಡವನ್ನು 24 ಗಂಟೆಗಳ ಕಾಲ ಸೂಕ್ತ ಭದ್ರತೆಗಾಗಿ ಪಿಐ ಬಿ.ಅಮರೇಶ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಗ್ರಾಮಗಳಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದೆ.ಆದರೆ ಮತದಾರರು ಮಾತ್ರ ಅಭ್ಯರ್ಥಿಗಳ ಭವಿಷ್ಯವನ್ನು ಮತಪಟ್ಟಿಗೆಯಲ್ಲಿ ಹಾಕಿದ್ದಾರೆ. ಇದೇ ತಿಂಗಳ ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದ್ದು ಯಾವೆಲ್ಲ ಅಭ್ಯರ್ಥಿಗಳು ಜನರ ಮನಸ್ಸು ಗೆದ್ದಿದ್ದಾರೆ ಎನ್ನುವುದು ಬಹಿರಂಗವಾಗಲಿದೆ.
ಮತದಾನ: ಭಂಕೂರ ಗ್ರಾಪಂಯಲ್ಲಿ 5120 ಪುರುಷ ಮತದಾರರು, 5343 ಮಹಿಳಾ ಮತದಾರರು ಸೇರಿ ಒಟ್ಟು10463 ಮತದಾರರಿದ್ದಾರೆ.ಇದರಲ್ಲಿ 2848 ಪುರುಷ ಮತದಾರರು, 2931 ಮಹಿಳಾ ಮತದಾರರು ಸೇರಿ ಒಟ್ಟು 5779 ಮತದಾರರು ಮತದಾನ ಮಾಡಿದ್ದು, ಶೇ.55 ರಷ್ಟು ಮತದಾನವಾಗಿದೆ.
ಮರತೂರ ಗ್ರಾಪಂಯಲ್ಲಿ 3285 ಪುರುಷ ಮತದಾರರು, 3248 ಮಹಿಳಾ ಮತದಾರರು ಸೇರಿ ಒಟ್ಟು 6533 ಮತದಾರರಿದ್ದಾರೆ.ಇದರಲ್ಲಿ 2375 ಪುರುಷ ಮತದಾರರು, 2209 ಮಹಿಳಾ ಮತದಾರರು ಸೇರಿ ಒಟ್ಟು 4584 ಮತದಾರರು ಮತದಾನ ಮಾಡಿದ್ದು, ಶೇ.70 ರಷ್ಟು ಮತದಾನವಾಗಿದೆ.
ಹೊನಗುಂಟಾ ಗ್ರಾಪಂಯಲ್ಲಿ 2346 ಪುರುಷ ಮತದಾರರು, 2351 ಮಹಿಳಾ ಮತದಾರರು ಸೇರಿ ಒಟ್ಟು 4697 ಮತದಾರರಿದ್ದಾರೆ.ಇದರಲ್ಲಿ 1564 ಪುರುಷ ಮತದಾರರು, 1500 ಮಹಿಳಾ ಮತದಾರರು ಸೇರಿ ಒಟ್ಟು 3064 ಮತದಾರರು ಮತದಾನ ಮಾಡಿದ್ದು, ಶೇ.65 ರಷ್ಟು ಮತದಾನವಾಗಿದೆ.
ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ 2862 ಪುರುಷ ಮತದಾರರು, 2843 ಮಹಿಳಾ ಮತದಾರರು ಸೇರಿ ಒಟ್ಟು 5706 ಮತದಾರರಿದ್ದಾರೆ.ಇದರಲ್ಲಿ 2060 ಪುರುಷ ಮತದಾರರು, 1867 ಮಹಿಳಾ ಮತದಾರರು ಸೇರಿ ಒಟ್ಟು 3927 ಮತದಾರರು ಮತದಾನ ಮಾಡಿದ್ದು, ಶೇ.69 ರಷ್ಟು ಮತದಾನವಾಗಿದೆ.
ಶಹಾಬಾದ ತಾಲೂಕಾ ರಚನೆಯಾದ ನಂತರ ಮೊದಲ ಗ್ರಾಪಂ ಚುನಾವಣೆ ಸಂಪೂರ್ಣ ಶಾಂತಿಯುತವಾಗಿ ನಡೆದಿದೆ.ಈಗಾಗಲೇ ಮತಪೆಟ್ಟಿಗೆಗಳನ್ನು ಸ್ಟ್ರಾಂಗ್ ರೂಮ್ನಲ್ಲಿ ಇಟ್ಟು, ಕೊಠಡಿಯನ್ನು ಸಂಪೂರ್ಣ ಸೀಲ್ ಮಾಡಲಾಗಿದೆ. 24 ಗಂಟೆಗಳ ಕಾಲ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಕಟ್ಟಡವನ್ನು ಶ್ವಾನದಳದಿಂದ ಪರೀಕ್ಷಿಸಿ ಮತಗಟ್ಟೆಗಳನ್ನು ಇಡಲಾಗಿದೆ.ಮತ ಎಣಿಕೆ ಕಾರ್ಯವು ಡಿಸೆಂಬರ್ 30 ರಂದು ನಡೆಯಲಿದೆ.ಅದಕ್ಕಾಗಿ ತಾಲೂಕಾಡಳಿತ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ –ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.