ಕಲಬುರಗಿ: ತೊಗರಿ ಖರೀದಿಗೆ ಫೆಬ್ರವರಿ 15ರ ವರೆಗೆ ನೊಂದಣಿ ಕಾರ್ಯ ವಿಸ್ತರಿಸಿ, ಏಪ್ರಿಲ್ 30ರ ವರೆಗೆ ಖರೀದಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಶೋಕ ಮ್ಯಾಗೇರಿ, ಪಾಂಡುರಂಗ ಮಾವಿನಕರ, ಶಾಂತಪ್ಪ ಪಾಟೀಲ, ಸುನೀಲ ಮಾನಪಡೆ, ಸುಧಾಮ ಧನ್ನಿ ಮಾತನಾಡಿ, ಜಿಲ್ಲಾಡಳಿತ ಡಿಸೆಂಬರ್ ಕೊನೆಯವರೆಗೆ ನೊಂದಣಿ ಹಾಗೂ ಜನೆವರಿ ಕೊನೆಯವರೆಗೆ ಖರೀದಿಗೆ ಸಮಯ ನಿಗದಿಪಡಿಸಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಖಂಡಿಸಿದರು.
ಕರೋನಾ ಹಾಗೂ ಅತಿವೃಷ್ಟಿಯಿಂದ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸತತ ಮಳೆಯಿಂದ ಇಳುವರಿ ಕಡಿಮೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ರೈತರ ಬೆನ್ನಿಗೆ ನಿಲ್ಲಬೇಕಾದ ಸರ್ಕಾರ, ಜಾಣಕುರುಡನಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.
ತೊಗರಿ ಬೆಳೆದ ಎಲ್ಲ ರೈತರ ತೊಗರಿ ಪ್ರತಿ ಕ್ವಿಂಟಲ್ 8000 ರೂಂ.ಗೆ ಖರೀದಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾನಿರತರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಲ್ಲಣಗೌಡ ಬನ್ನೂರು, ಸಿದ್ದಯ್ಯ ಸ್ವಾಮಿ ಇನ್ನಿತರರು ಸಿದ್ದಲಿಂಗ್ ಪಾಳಾ,ರಾಯಪ್ಪ ಹುರಮುಂಜಿ ಮೈಲಾರಿ ಇನ್ನು ಮುಂತಾದವರು ಇದ್ದರು.