ಸುರಪುರ: ಈಗಾಗಲೆ ಗ್ರಾಮೀಣ ಭಾಗದ ಜನರು ನಿರಂತರವಾಗಿ ಬರಗಾಲ ಆವರಿಸಿದ್ದರಿಂದ ತತ್ತರಿಸಿ ಹೋಗಿದ್ದಾರೆ,ಇಂತಹ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ವರದಾನವಾದ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸದೆ ಬಡ ಜನತೆಗೆ ಸಂಕಷ್ಟಕ್ಕೆ ದೂಡಿದಂತಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದೌಲಸಾಬ್ ನದಾಫ್ ಬೇಸರ ವ್ಯಕ್ತಪಡಿಸಿದರು.
ತಾಲ್ಲುಕಿನ ಆಲ್ದಾಳ ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ನಾಗರಾಳ ಗ್ರಾಮದ ಕೃಷಿ ಕೂಲಿ ಕಾರರು ಉದ್ಯೋಗವಿಲ್ಲದೆ ಪರದಾಡುವಂತಾಗಿದೆ,ಅಲ್ಲದೆ ಅನೇಕರಿಗೆ ಇದುವರೆಗೆ ಉದ್ಯೋಗ ಖಾತ್ರಿ ಯೊಜನೆಯ ಜಾಬ್ ಕಾರ್ಡಗಳನ್ನು ನೀಡಿಲ್ಲ ಜನರಿಗೆ ಆಗುತ್ತಿರುವ ತೊಂದರೆ ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ,ತಮಗೆಲ್ಲರಿಗೆ ಹೇಗಿದ್ದರು ತಿಂಗಳಾದರೆ ಸಂಬಳ ಬರಲಿದೆ ಆದರೆ ಬಡ ಜನತೆಯ ಗೋಳು ಕೇಳುವವರು ಯಾರೆಂದು ಆಕ್ರೋಶ ವ್ಯಕ್ತಪಡಿಸಿ,ಕೂಡಲೆ ಎಲ್ಲ ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ತಾಲ್ಲೂಕು ಸಂಚಾಲಕ ಶರಣಪ್ಪ ಅನಕಸುಗೂರು ಮಾತನಾಡಿ,ಈ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕರಿಗೆ ಜಾಬ್ ಕಾರ್ಡಗಳಿಲ್ಲ.ಅವರೆಲ್ಲರಿಗು ಫಾರಂ ನಂಬರ್ ಆರರ ಮೂಲಕ ಕೆಲಸ ನೀಡಬೇಕು ಮತ್ತು ಗ್ರಾಮಗಳಲ್ಲಿ ಸಭೆಗಳನ್ನು ನಡೆಸದೆ ಇಷ್ಟ ಬಂದವರಿಗೆ ಆಶ್ರಯ ಮನೆಗಳನ್ನು ನೀಡಲಾಗುತ್ತಿದೆ.ಕೂಡಲೆ ಗ್ರಾಮ ಸಭೆ ನಡೆಸಿ ಮನೆಗಳ ಹಂಚಿಕೆ ಮಾಡುವಂತೆ ಆಗ್ರಹಿಸಿದರು.
ನಂತರ ತಾಲ್ಲುಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರಾಮ ಪಂಚಾಯತಿ ಅಭೀವೃಧ್ಧಿ ಅಧಿಕಾರಿ ರಾಜಕುಮಾರ ಸ್ವೀಕರಿಸಿ,ಫಾರಂ ನಂಬರ್ ಆರು ಸ್ವೀಕರಿಸಿ ಕೆಲಸ ನೀಡುವುದಾಗಿ ಭರವಸೆ ನೀಡಿದರು ಹಾಗು ಶೀಘ್ರವೆ ಜಾಬ್ ಕಾರ್ಡ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಈ ಸಂದರ್ಭದಲ್ಲಿ ಮಲ್ಲಮ್ಮ ಕೊಡ್ಲಿ,ಖಾಜಾಸಾಬ್ ಬೋನಾಳ,ಇಮಾಂಬಿ ದೊಡ್ಮನಿ,ಅಹ್ಮದ್ ಪಠಾಣ್, ಮರೆಮ್ಮ, ಮಾನಮ್ಮ,ಸಾಬಮ್ಮ,ಸೋಮರಾಯ,ರಾಜಾಸಾಬ್,ದೌಲಸಾಬ್,ಭೀಮರಾಯ,ದೇವಮ್ಮ ಸೇರಿದಂತೆ ಅನೇಕರಿದ್ದರು.