ಶಹಾಬಾದ: ವಾರ್ಡ ನಂ.19ರಲ್ಲಿ ಸುಮಾರು ಐದಾರು ಕಡೆಗಳಲ್ಲಿ ಚರಂಡಿಯ ಮೇಲಿನ ಸ್ಲ್ಯಾಬ್ ಒಡೆದು ಹೋಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರು ತಿಳಿನಿಂದ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸದಿರುವುದಕ್ಕೆ, ವಾರ್ಡ ಸದಸ್ಯ ನಾಗರಾಜ ಕರಣಿಕ್ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡುವತ್ತ ಮುಂದಾಗಿದ್ದಕ್ಕೆ, ನಗರಸಭೆ ಸಾರ್ವಜನಿಕರ ನಗೆಪಾಟಲಿಗೆ ಗುರಿಯಾಗಿದೆ.
ವಾರ್ಡ ನಂ.19ರಲ್ಲಿನ ಚರಂಡಿಯ ಮೇಲಿನ ಸ್ಲ್ಯಾಬ್ ಒಡೆದು ಹೋಗಿದೆ.ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ, ಅಧಿಕಾರಿಗಳಾದ ತಾವು ಸಣ್ಣಪುಟ್ಟ ಕೆಲಸಗಳಿಗೆ ಹೇಳಿಸಿಕೊಳ್ಳದೇ ತಕ್ಷಣವೇ ದುರಸ್ತಿ ಮಾಡಿ ಎಂದು ಶಾಸಕ ಬಸವರಾಜ ಮತ್ತಿಮಡು ಸಾಮನ್ಯ ಸಭೆಯಲ್ಲಿ ಹೇಳಿದರೂ, ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲದಿರುವುದಕ್ಕೆ ವಾರ್ಡ ಸದಸ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾರ್ಡ ನಂ19 ರ ಸದಸ್ಯ ನಾಗರಾಜ ಕರಣಿಕ್ ಈಗಾಗಲೇ ಹತ್ತು ಹಲವು ಬಾರಿ ನಗರಸಭೆಯ ಅಧಿಕಾರಿಗಳಿಗೆ ವಾರ್ಡನಲ್ಲಿ ಐದಾರು ಕಡೆಗಳಲ್ಲಿ ಚರಂಡಿಯ ಮೇಲಿನ ಸ್ಲ್ಯಾಬ್ ಒಡೆದು ಹೋಗಿವೆ.ಸಾರ್ವಜನಿಕರು ಅದರಲ್ಲಿ ಬೀಳುತ್ತಿದ್ದಾರೆ.ಹಲವರಿಗೆ ಗಂಭೀರ ಗಾಯಗಳಾಗಿವೆ.ಅಲ್ಲದೇ ಜನರಿಂದ ಉಗುಳಿಸುಕೊಳ್ಳುವಂತ ವಾತಾವರಣ ನಿರ್ಮಾಣವಾಗಿದೆ.ಆದರೂ ನಗರಸಭೆಯ ಅಧಿಕಾರಿಗಳು ಸುಮಾರು 6 ತಿಂಗಳಿನಿಂದ ದೂರು ನೀಡುತ್ತಿದ್ದರೂ, ನಗರಸಭೆಯ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ನಗರಸಭೆಯ ಸಾಮನ್ಯ ಸಭೆಯಲ್ಲಿ ಈ ಬಗ್ಗೆ ಶಾಸಕರಿಗೆ ದೂರು ಸಲ್ಲಿಸಿದಾಗ, ಶಾಸಕರು ಇಂತಹ ಚಿಕ್ಕಪುಟ್ಟ ಸಮಸ್ಯೆಗಳನ್ನು ಬೇಗನೆ ಬಗೆಹರಿಸಬೇಕು.ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ, ಕ್ರಮಕೈಗೊಂಡಿಲ್ಲವೇಕೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಅಲ್ಲದೇ ಕೂಡಲೇ ಸ್ಲ್ಯಾಬ ನಿರ್ಮಾಣ ಕೈಗೊಳ್ಳಿ ಎಂದು ಎಇಇ ಹಾಗೂ ಜೆಇ ಅವರಿಗೆ ತಾಕೀತು ಮಾಡಿದ್ದರು. ಆದರೆ ಸಾಮನ್ಯ ಸಭೆ ಮುಗಿದು ತಿಂಗಳು ಕಳೆಯುತ್ತ ಬಂದರೂ ಇಲ್ಲಿಯವರೆಗೆ ದುರಸ್ತಿಯೂ ಮಾಡುತ್ತಿಲ್ಲ.ಅಲ್ಲದೇ ಈ ಬಗ್ಗೆ ವಾರ್ಡ ಸದಸ್ಯರು ಹಾಗೂ ನಾಗರಿಕರು ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ.ನಗರಸಭೆಯ ಸದಸ್ಯ ಹಾಗೂ ನಾಗರಿಕರ ಮಾತಿಗೆ ಬೆಲೆ ಕೊಡದೇ ಇದ್ದರೂ ಸರಿ.ಆದರೆ ಶಾಸಕರ ಮಾತಿಗೂ ಬೆಲೆ ಕೊಡದ ಅಧಿಕಾರಿಗಳು ಇದ್ದರೇನು ಪ್ರಯೋಜನ ಎಂದು ವಾರ್ಡ ಸದಸ್ಯ ನಾಗರಾಜ ಕರಣಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಜನರಿಂದ ಅನಿಸಿಕೊಳ್ಳುವುದಕ್ಕೆ ಆಗುತ್ತಿಲ್ಲವಾದ್ದರಿಂದ ವಾರ್ಡ ಸದಸ್ಯರೇ ತಮ್ಮ ಸ್ವಂತ ಖರ್ಚಿನಲ್ಲಿ ಸ್ಲ್ಯಾಬ್ ನಿರ್ಮಾಣಕ್ಕೆ ಮುಂದಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯ ಮರೆತು ನಿರ್ಲಕ್ಷ್ಯ ಮನೋಭಾವನೆ ತೋರುತ್ತಿರುವುದಕ್ಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.