ವಾಡಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಒಂದು ವರ್ಷದ ಹೋರಾಟದ ಬಳಿಕ ಈಗ ಶಾಲೆಗಳು ಬಾಗಿಲು ತೆರೆದಿದ್ದು, ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಷರ ಕಲಿಕೆಯಿಂದ ದೂರ ಉಳಿದಿದ್ದ ಮಕ್ಕಳು ಉತ್ಸಾಹದಿಂದ ಶಾಲೆಗೆ ಬರುತ್ತಿದ್ದಾರೆ. ಕೆಲ ಪೋಷಕರಲ್ಲಿ ಇನ್ನೂ ಆತಂಕ ನಿವಾರಣೆಯಾಗಿಲ್ಲ. ಭಯ ಮತ್ತು ಆತಂಕವನ್ನು ದೂರವಿಟ್ಟು ಮಕ್ಕಳನ್ನು ಶಾಲೆಗೆ ಹಾಜರುಪಡಿಸಬೇಕು ಎಂದು ಮಾರ್ಗದರ್ಶಿ ಸಂಸ್ಥೆಯ ಕೊಂಚೂರು ವಲಯ ಮುಖ್ಯಸ್ಥೆ ಇಂದಿರಾ ಭಜಂತ್ರಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಹತ್ತನೇ ತರಗತಿಯ ಮಕ್ಕಳಿಗೆ ಪಾಠಗಳು ಶುರುವಾಗಿವೆ. ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ವಿದ್ಯಾಗಮ ಶಾಲೆ ಆರಂಭಿಸಲಾಗಿದೆ. ಸರಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಯೇ ಶಾಲೆ ಆರಂಭಕ್ಕೆ ಆದೇಶ ನೀಡಿದೆ. ಶಿಕ್ಷಣದಿಂದ ವಂಚಿತರಾದ ಮಕ್ಕಳು ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸಾಮಾಜಿಕ ಅಂತರ ಕಾಪಾಡಿಕೊಂಡು ಸುರಕ್ಷತೆಯಿಂದ ಅಭ್ಯಾಸ ಮುಂದು ವರೆಸಲು ಶಾಲೆಗಳಲ್ಲಿ ಎಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದೆ. ಮಾರ್ಗದರ್ಶಿ ಸಂಸ್ಥೆ ಹಾಗೂ ಬೆಂಗಳೂರಿನ ಕ್ರೈ ಸಂಸ್ಥೆಯ ಮನವಿಯ ಮೇರೆಗೆ ತರಗತಿ ಕೋಣೆಗಳಿಗೆ ಸ್ಯಾನಿಟೈಸರ್ ಸಿಂಪರಣೆ ಮಾಡಲಾಗಿದೆ. ಕೊರೊನಾ ಭಯದಿಂದ ಮಕ್ಕಳ ಅಭ್ಯಾಸ ಹಾಳಾಗಬಾರದು. ಪೋಷಕರು ನಿರ್ಭಯವಾಗಿ ಮಕ್ಕಳನ್ನು ಸೋಮವಾರದಿಂದ ಶಾಲೆಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.