ದಿನಪತ್ರಿಕೆ ತರುವ ಹುಡುಗರನ್ನು ಗೌರವಿಸಿ: ಪವಾರ

0
76

ಕಲಬುರಗಿ: ದಿನಪತ್ರಿಕೆ ರೂಪದಲ್ಲಿ ಪ್ರಪಂಚದ ಜ್ಞಾನವನ್ನು ಹೊತ್ತು ಬೆಳ್ಳಂಬೆಳಗ್ಗೆ ಮನೆ ಬಾಗಿಲಿಗೆ ಬರುವ ಹುಡುಗರನ್ನು ಓದುಗರು ಗೌರವದಿಂದ ಕಾಣಬೇಕು ಎಂದು ಪುರಸಭೆ ಉಪಾಧ್ಯಕ್ಷ ತಿಮ್ಮಯ್ಯ ಪವಾರ ಹೇಳಿದರು.

ವಾಡಿ ಪಟ್ಟಣದ ಪುರಸಭೆಯಲ್ಲಿ ಗುರುವಾರ ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅವರ ವತಿಯಿಂದ ಏರ್ಪಡಿಸಲಾಗಿದ್ದ ವಿವಿಧ ದಿನಪತ್ರಿಕೆಗಳ ವಿತರಕರಿಗೆ ಚಳಿಗಾಲದ ಸುರಕ್ಷತೆಗಾಗಿ ಶ್ವೆಟರ್ ವಿತರಣಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಅನೇಕ ಮಹಾನ್ ವ್ಯಕ್ತಿಗಳು ಬಾಲ್ಯದ ದಿನಗಳಲ್ಲಿ ಹಾಲು ದಿನಪತ್ರಿಕೆಗಳನ್ನು ವಿತರಿಸಿ ಎತ್ತರಕ್ಕೆ ಬೆಳೆದವರಿದ್ದಾರೆ. ಒಂದು ದಿನಪತ್ರಿಕೆ ಮುದ್ರಣಗೊಂಡು ಓದುಗರ ಕೈಸೇರುವ ಪ್ರಸಂಗದ ಹಿಂದೆ ನೂರಾರು ಜನರ ಪರಿಶ್ರಮವಿರುತ್ತದೆ.

Contact Your\'s Advertisement; 9902492681

ಮುದ್ರಣಗೊಂಡ ಪತ್ರಿಕೆಯನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ಹುಡುಗರು ಪಡಬಾರದ ಕಷ್ಟ ಪಟ್ಟಿರುತ್ತಾರೆ ಎಂಬುದನ್ನು ಓದುಗರು ಮರೆಯಬಾರದು. ಮಳೆಯಿರಲಿ ಚಳಿಯಿರಲಿ ನಿಗದಿತ ಸಮಯಕ್ಕೆ ಓದುಗನಿಗೆ ಪತ್ರಿಕೆ ತಲುಪಿಸುವ ಹುಡುಗರ ಸಾಹಸ ಮೆಚ್ಚುವಂತಹದ್ದು. ಬೆಳಗಾಗುವಷ್ಟರಲ್ಲೇ ಪತ್ರಿಕೆಗಳನ್ನು ತಲುಪಿಸಿ ನಿಟ್ಟುಸಿರುವ ಬಿಡುವ ಹುಡುಗರ ಕಷ್ಟಕ್ಕೆ ಪ್ರತಿಯೊಬ್ಬರೂ ಮರುಗಲೇಬೇಕು. ಪತ್ರಿಕೆ ಬರುವುದು ತುಸು ತಡವಾದರೆ ಚಟಪಡಿಸುವ ಓದುಗರು, ಅವರನ್ನು ಸಹನೆಯಿಂದ ವಿಚಾರಿಸುವುದನ್ನು ಕಲಿಯಬೇಕು ಎಂದರು.

ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ ಮಾತನಾಡಿ, ವರದಿಗಾರನಿಂದ ಸಿದ್ಧವಾಗುವ ಒಂದು ಸುದ್ದಿ ಸಂಪಾದಕರಿಂದ ಮಾನ್ಯತೆ ಪಡೆದು ಮುದ್ರಣವಾಗಿ ನಮ್ಮ ಕೈಸೇರುವುದರ ಹಿಂದೆ ವಿತರಕರ ಸೇವೆ ದೊಡ್ಡದಿದೆ. ದಿನಪತ್ರಿಕೆ ಓದದೆ ನಮಗೆ ದಿನವೇ ಹೋಗುವುದಿಲ್ಲ. ಕಡಿಮೆ ಕಾಸಿಗಾಗಿ ದುಡಿಯುವ ದಿನಪತ್ರಿಕೆಗಳ ವಿತರಕರು ಚಳಿಗಾಲ ಮತ್ತ ಮಳೆಗಾಲಗಳಲ್ಲಿ ಆರೋಗ್ಯ ಸುರಕ್ಷತೆಗೆ ಹೆಚ್ಚು ಅಧ್ಯತೆ ನೀಡಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಸಹ ಕಾರ್ಯದರ್ಶಿ ಮಡಿವಾಳಪ್ಪ ಹೇರೂರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸಂಘಟನಾಧಿಕಾರಿ ಚಂದ್ರಕಾಂತ ಪಾಟೀಲ, ಕಾಶೀನಾಥ ಧನ್ನಿ, ಕೆ.ವಿರೂಪಾಕ್ಷಿ, ಪುರಸಭೆ ಸದಸ್ಯರಾದ ಶರಣು ನಾಟೀಕಾರ, ಮಲ್ಲಯ್ಯ ಗುತ್ತೇದಾರ, ವಿಶಾಲ ನಂದೂರಕರ, ಮುಖಂಡರಾದ ತುಕಾರಾಮ ರಾಠೋಡ, ವಿಜಯಕುಮಾರ ಸಿಂಗೆ, ಅಶ್ರಫ್ ಖಾನ್, ಪರಶುರಾಮ ಕಟ್ಟಿಮನಿ, ಶರಣಪ್ಪ ವಾಡೇಕರ, ಅಬ್ರಾಹಂ ರಾಜಣ್ಣ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here