ಕಲಬುರಗಿ: ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಟೆಂಟ್ ಗೆ ಆಗಮಿಸಿ ಬೆಂಬಲ ಸೂಚಿಸಿದರು.
ಸಾಂಕೇತಿಕವಾಗಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ರೈತರನ್ನುದ್ದೇಶಿಸಿ ಮಾತನಾಡಿದ ಅಲ್ಲಮಪ್ರಭು ಪಾಟೀಲ್ ಅವರು, ತೊಗರಿಗೆ ೮೭೫೦ ರೂ. ಬೆಂಬಲ ಬೆಲೆ ನೀಡಬೇಕು ಹಾಗೂ ಬೆಳೆದಷ್ಟು ತೊಗರಿ ಖರೀದಿಸಬೇಕೆಂಬ ಬೇಡಿಕೆಯನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರನ್ನು ಬರಮಾಡಿಕೊಂಡು ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ ರೈತ ಮುಖಂಡ ಸುನೀಲ ಮಾನಪಡೆ ಅವರು, ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಚಾರಿತ್ರಿಕ ಹೋರಾಟಕ್ಕೆ ಬೆಂಬಲಿಸಿ ಈ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡಯುವವರೆಗೂ ಹೋರಾಟ ಮುಂದುವರೆಸಲಾಗುವುದೆಂದು ತಿಳಿಸಿದರು.
ಕೇಂದ್ರ ಸರ್ಕಾರದ ಕೃಷಿಗೆ ಸಂಬಂಧಿಸಿದ ನಾಲ್ಕು ಮಸೂದೆಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕೆಂದು ಸುನೀಲ ಮಾನಪಡೆ ಒತ್ತಾಯಿಸಿದರು.
ರೈತರ ಧರಣಿ ಸತ್ಯಾಗ್ರಹ ಇಂದು ೧೦ನೇ ದಿನಕ್ಕೆ ಕಾಲಿರಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಸುನಿಲ್ ಮಾನಪಡೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮೇಘರಾಜ ಕಠಾರೆ, ಪಾಂಡುರಂಗ ಮಾವಿನಕರ, ರೇವಣಸಿದ್ದಪ್ಪ ಕಲಬುರಗಿ, ಶಾಂತಪ್ಪ ಪಾಟೀಲ, ಸುಧಾಮ ಧನ್ನಿ, ಮಲ್ಲಣಗೌಡ ಬನ್ನೂರು, ಕಾಶಿನಾಥ ಬಂಡೆ, ರಜಾಕಸಾಬ ಮುಂತಾದವರು ಉಪಸ್ಥಿತರಿದ್ದರು.