ಸಂಕ್ರಾಂತಿ ಸಂಭ್ರಮ
ಸಂಕ್ರಾಂತಿ ಬಂದೈತಿ ಸಡಗರ ತಂದೈತಿ
ಹಳ್ಳಿಗೆ ಹಳ್ಳಿಯೆ ಚಲುವಿಲೆ ನಗುತೈತಿ
ಲಂಗ ದಾವಣಿ ತೊಟ್ಟು ಮೂಗಿಗೆ ನತ್ತಿಟ್ಟು
ತಾಲೂಕ ಜುಮುಕಿ ಕಿವಿಯೋಲೆ ಇಟ್ಟು
ಅಂಗಳ ಸಾರಿಸಿ ಬಾಗಿಲ ಸಿಂಗರಿಸಿ
ಬಣ್ಣ ಬಣ್ಣದ ರಂಗೋಲಿ ಬಿಡಿಸ್ಯಾರ
ತೋರಣ ಕಟ್ಯಾರ ಕಬ್ಬನ್ನು ಇಟ್ಯಾರ
ಚೆಂಡು ಹೂಮಾಲೆ ಬಾಗಿಲಿಗೆ ಕಟ್ಯಾರ
ಮಲ್ಲಿಗೆ ಮುಡಿದು ಸಿಂಧೂರ ಇಟ್ಟಾರ
ಎಳ್ಳು ಬೆಲ್ಲವ ಮನೆ ಮನೆಗೆ ಹಂಚ್ಯಾರ
ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ
ಕಳ್ಳು ಬಳ್ಳಿಯ ಕೂಡ ಬೇರತಾರ…
ನೆಲದವ್ವ ನೀಡಿದ ಫಸಲನ್ನು ಕಣ್ಣಿಗೊತ್ತಿ
ಹಿಗ್ಗಿಲೆ ಸುಗ್ಗಿಯ ಮಜವನ್ನು ಸವಿಯುತ್ತಾ
ಸಂಭ್ರಮದಿ ರೈತರು ರಾಶಿಯ ಮಾಡ್ಯಾರ
ಭೂತಾಯಿ ಪೂಜಿಸಿ ಕೈಮುಗಿದು ಬೇಡ್ಯಾರ
ಕಿಚ್ಚನ್ನು ಉರಿಸ್ಯಾರ ಎತ್ತನು ಹಾರಿಸ್ಯಾರ
ಗತ್ತಿಲೆ ಎತ್ತಿನ ಮೈಯ್ಯೊಮ್ಮೆ ತುರಿಸ್ಯಾರ
ದನ ಕರುವ ಸಿಂಗರಿಸಿ ಧಾನ್ಯವ ತಿನಿಸ್ಯಾರಾ
ಶಿರಬಾಗಿ ನಮಿಸುತ ವರಗಳ ಬೇಡ್ಯಾರ
ಸಂಕ್ರಮಣ ಕಾಲಕ್ಕೆ ಭಾನ ಭಾಸ್ಕರನು
ದಕ್ಷಿಣ ದಿಕ್ಕಿನಿಂದ ಉತ್ತರಕ್ಕೆ ತಿರುಗ್ಯಾನ
ಉಳುವ ಯೋಗಿಯ ಬಾಳಿಗೆ ಬೆಳಕಾಗಿ
ಉತ್ತಮ ಇಳುವರಿ ನೀಡಿ ಹರಸಲಿ…..