ಆಳಂದ: ಸಮಾಜ ಸೇವೆಯನ್ನು ಹಲವು ಕ್ಷೇತ್ರದಲ್ಲಿ ಮಾಡಬಹುದಾಗಿದ್ದರೂ ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡು ಸಮಾಜ ಸೇವೆ ಮಾಡಿದರೇ ಅದು ಪ್ರಬಲ ಮಾರ್ಗವಾಗುತ್ತದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.
ಶನಿವಾರ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯ ಮಂಡಳಿಯ ಅಡಿಯಲ್ಲಿ ಮಂಜೂರಾದ ೪೬.೫೦ ಲಕ್ಷ.ರೂ ವೆಚ್ಚದ ೩ ಕೋಣೆಗಳ ಹಾಗೂ ೧೫ ಲಕ್ಷ.ರೂ ವೆಚ್ಚದ ಗ್ರಂಥಾಲಯ ಕಟ್ಟಡ ನಿರ್ಮಾಣ ಉದ್ಘಾಟಿಸಿ ಮಾತನಾಡಿದರು.
ಗ್ರಾಮಸ್ಥರು ಕೆರೆ ನಿರ್ಮಾಣ ಮಾಡಲು ಮನವಿ ಪತ್ರ ನೀಡಿದ್ದರು ಈಗ ಕೆರೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಅದರಂತೆ ಗ್ರಾಮಕ್ಕೆ ಪದವಿ ಕಾಲೇಜಿನ ಅವಶ್ಯಕತೆ ಇದೆ ಸರ್ಕಾರದ ಜೊತೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಪದವಿ ಕಾಲೇಜು ಆರಂಭ ಮಾಡಲು ಕ್ರಮವಹಿಸಲಾಗುವುದು ಎಂದರು.
ಗ್ರಾಮಸ್ಥರು ಗ್ರಾಮಕ್ಕೆ ಮಂಜೂರಿಯಾದ ಕಾಮಗಾರಿಗಳನ್ನು ಒಗ್ಗಟ್ಟಿನಿಂದ, ದೃಢಸಂಕಲ್ಪದಿಂದ ಮಾಡಿಸಬೇಕು ಯಾವುದೇ ಕಾರಣದಿಂದಲೂ ಅನುದಾನ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಎಲ್ಲರೂ ಸಮಾಜ ಸೇವೆ ಮಾಡ ಬಯಸುತ್ತಾರೆ ಆದರೆ ಆ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದೆ ತಾಲೂಕಿನ ಸರ್ವ ಜನಾಂಗದ ಆಶೀರ್ವಾದದಿಂದ ಕಳೆದ ೫ ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ೪ ಬಾರಿ ಶಾಸಕನಾಗಿ ನಿಮ್ಮ ಸೇವೆ ಸಲ್ಲಿಸುತ್ತಿದ್ದೇನೆ ಎಂದು ನುಡಿದರು.
ಗಾಣಗಾಪೂರಕ್ಕೆ ಸಂಪರ್ಕ ಕಲ್ಪಿಸುವ ೧೯ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಗ್ರಾಮದ ಪಿಯು ಕಾಲೇಜಿಗೆ ೨೫ ಲಕ್ಷ.ರೂ ವೆಚ್ಚದ ಸಾಮಗ್ರಿಗಳು, ಕಾಲೇಜಿನಲ್ಲಿ ೧೫ ಲಕ್ಷ.ರೂ ವೆಚ್ಚದ ೬ ಶೌಚಾಲಯ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿವೆ. ಅಂಬೇಡ್ಕರ್ ವೃತ್ತದಿಂದ ಕಂಬಾರ ಅಂಗಡಿಯವರೆಗೆ ಡಾಂಬರೀಕರಣ ರಸ್ತೆ ಹಾಗೂ ರಸ್ತೆ ಮಧ್ಯೆ ಸ್ಟ್ರೀಟ್ ಲೈಟ್ ಅಳವಡಿಸುವ ೯೦ ಲಕ್ಷ.ರೂ ಕಾಮಗಾರಿ ಪ್ರಗತಿಯಲ್ಲಿದೆ. ೬೨ ಲಕ್ಷ. ರೂ ವೆಚ್ಚದಲ್ಲಿ ೪ ಹೆಚ್ಚುವರಿ ಕೋಣೆಗಳ ನಿರ್ಮಾಣ ಪ್ರಕ್ರಿಯೆ ಒಪ್ಪಂದದ ಹಂತದಲ್ಲಿದೆ.
ವಾರ್ಡ ನಂ ೨ರಲ್ಲಿ ಶರಣಬಸವೇಶ್ವರ ದೇವಸ್ಥಾನದಿಂದ ಸ್ಮಶಾನದವರೆಗೆ ೧೫ ಲಕ್ಷ. ರೂ.ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ, ನಿಂಬರ್ಗಾ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦ ಲಕ್ಷ.ರೂ ವೆಚ್ಚದ ಚರಂಡಿ, ಅಲ್ಲದೇ ೨೦ ಲಕ್ಷ.ರೂ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳು ಗ್ರಾಮಕ್ಕೆ ಮಂಜೂರಿಯಾಗಿದ್ದು ಕೆಲಸ ಪ್ರಾರಂಭಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೇಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ತಾ.ಪಂ ಸದಸ್ಯ ದತ್ತಾತ್ರೇಯ ದುರ್ಗದ, ಪ್ರಭು ಸರಸಂಬಿ, ಮುಖಂಡರಾದ ಮಹಿಬೂಬ್ ಆಳಂದ, ರಾಮಚಂದ್ರ ಅವರಳ್ಳಿ, ಪ್ರಭಾಕರ ರಾಮಜಿ, ಅಮೃತ ಬಿಬ್ರಾಣಿ, ಬಸಯ್ಯ ಗುತ್ತೇದಾರ, ಗುಂಡಪ್ಪ ಪೂಜಾರಿ, ಕಾಲೇಜಿನ ಪ್ರಾಚಾರ್ಯ ದೇವೆಂದ್ರ ಬೆಳಗೆ, ಮಲ್ಲಿನಾಥ ನಾಟೀಕಾರ, ಅಪ್ಪಾರಾವ ಮಾಸ್ಟರ್, ಶಿವಪುತ್ರ ಮಾಳಗೆ, ಪ್ರಭಾಕರ ಮಡ್ಡಿತೋಟ, ರಮೇಶ ಗುಣಮಳ್ಳಿ, ಚಂದ್ರಕಾಂತ ಬಿಬ್ರಾಣಿ, ಲಕ್ಷ್ಮೀಕಾಂತ ದುಗೊಂಡ, ಸಂತೋಷ ಶರಣ, ಶಿವರಾಯ ಸಲಗರ, ಸಿದ್ದಾರಾಮ ಅಷ್ಟಗಿ, ದತ್ತಪ್ಪ ಬಿದನಕರ, ದತ್ತಪ್ಪ ತೋಳಿ, ಮಲ್ಲಿನಾಥ ನಾಗಶೆಟ್ಟಿ, ಮಲ್ಲಿನಾಥ ಒಡೆಯರ, ಶಾಂತು ಯಳಸಂಗಿ, ಈರಪ್ಪ ನಂದಿ, ರಾಜು ಕೆರಮಗಿ ಸೇರಿದಂತೆ ಇತರರು ಇದ್ದರು.