ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಡಿತಗೊಳಿಸಲಾದ ಅನುದಾನ ಬಿಡುಗಡೆಗೆ ಆಗ್ರಹ

0
32

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂದಿಸಿದ ಈಗಾಗಲೇ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ಮುಂದುವರೆಸಬೇಕು, ಯೋಜನೆಗಳನ್ನು ಮುಂದುವರೆಸಲು ಬೇಕಾಗುವ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕೆಂದು ಭಾರತ ಕಮ್ಯುನಿಷ್ಟ್ ಪಕ್ಷ ( ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸರುವ ಸಮಿತಿಯ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹಾಗೂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸುತ್ತ ಬಂದಿರುವ ಅನುದಾನ ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ರದ್ದು ಮಾಡಿರುವುದು ಖಂಡನೀಯವಾದಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತನ್ನ ಮೂಲಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ,ಕ್ರಿಶ್ಚಿಯನ್, ಸಿಖ್, ಬುದ್ಧ, ಪಾರ್ಸಿ ಮತ್ತು ಜೈನ ಸಮುದಾಯಗಳ ಜನಪರ ಕಲ್ಯಾಣ ಯೋಜನೆಗಳಿಗೆ ನಿಗದಿಗೊಳಿಸಲಾದ ಅನುದಾನ ಕಡಿತದ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.

Contact Your\'s Advertisement; 9902492681

2019- 20ನೇ ಸಾಲಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಅನುದಾನವನ್ನು 1867 ಕೋ.ರೂ.ಗಳಿಂದ 1570ಕೋ.ರೂ.ಗೆ ಕಡಿತ ಗೊಳಿಸಿದೆ. 2020-21ನೇ ಸಾಲಿನಲ್ಲಿ ತಮ್ಮ ನೇತೃತ್ವದ ಸರಕಾರ ಮಂಡಿಸಿದ ಬಜೆಟ್‌ನಲ್ಲಿ 1177 ಕೋ.ರೂ.ಗಳಷ್ಟಿದ್ದ ಅನುದಾನವನ್ನು ಮತ್ತೆ ಕಡಿತಗೊಳಿಸಿ 1055 ಕೋ.ರೂ.ಗಳಿಗೆ ನಿಗದಿಗೊಳಿಸಿದೆ. ಇತ್ತೀಚಿಗೆ ಮತ್ತೆ ಅದರಲ್ಲಿ 50 ಕೋಟಿ ರೂ. ಅನುದಾನ ಕಡಿತಗೊಳಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಳೆದ 5 ವರ್ಷಗಳಿಂದ ಜಾರಿಯಲ್ಲಿಟ್ಟಿದ್ದ ಹಲವು ಜನಪರ ಕಲ್ಯಾಣ ಯೋಜನೆಗಳನ್ನು ಈಗ ಅನುದಾನ ಕಡಿತಗೊಳಿಸಿರುವುದರಿಂದ ಜಾರಿಗೊಳಿಸದೆ ನಿಲ್ಲಿಸಿದೆ ಎಂದು ಅಸಮಧಾನ ವ್ಯಕ್ತಪಡಿಸಿದೆ.

ಹಿಂದಿನ ಸರಕಾರಗಳು ಜಾರಿಯಲ್ಲಿಟ್ಟಿದ್ದ ಕಾಲೋನಿ ಅಭಿವೃದ್ದಿ ಯೋಜನೆ, ಶಾದಿಭಾಗ್ಯ ಯೋಜನೆಗಳನ್ನು ರದ್ದುಗೊಳಿಸಿದೆ. ಇವೆಲ್ಲಕ್ಕಿಂತ ಪ್ರಮುಖ ಯೋಜನೆಗಳಾದ, ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರೀಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತಹ ಯೋಜನೆಗಳ 2019-20 ನೇ ಸಾಲಿನ ಅನುದಾನ ಸರಕಾರ ಇಲ್ಲಿಯವರೆಗೆ ಬಿಡುಗಡೆಗೊಳಿಸದೇ ಇರುವದು ವಿದ್ಯಾರ್ಥಿಗಳಿಗೆ ಸಾಕಷ್ಟು ಆರ್ಥಿಕ ತೊಂದರೆ ನೀಡುವ ಕ್ರಮವಾಗಿದೆ. ರಾಜ್ಯದಲ್ಲಿ 2016-17ರಿಂದ ಜಾರಿಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಸಂಶೋಧನೆ (ಪಿ.ಎಚ್.ಡಿ./ಎಂ.ಫೀಲ್) ಕೈಗೊಳ್ಳಲು ಪ್ರತಿ ತಿಂಗಳು ನೀಡಲಾಗುತ್ತಿದ್ದ ಪ್ರೋತ್ಸಾಹಧನ 25,000.ರೂಗಳನ್ನು 8333.ರೂಗಳಿಗೆ ಕಡಿತಗೊಳಿಸಿದ್ದರಿಂದ ಯಾರೂ ಸಂಶೋಧನೆಯನ್ನು ಪೂರ್ಣಗೊಳಿಸದಂತಹ ವಾತಾವರಣ ನಿರ್ಮಾಣಗೊಂಡಿದೆ ಎಂದು ಸಮಿತಿಯ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.

2020-21ನೇ ಸಾಲಿನಲ್ಲಿ ರಾಜ್ಯಾದ್ಯಂತ ಸುಮಾರು 300 ವಿದ್ಯಾರ್ಥಿಗಳು ಸಂಶೋಧನೆಯ ಕಾರ್ಯದಲ್ಲಿ ತೊಡಗಿದವರು ಅಗತ್ಯ ಪ್ರೋತ್ಸಾಹ ಧನವಿಲ್ಲದೆ ತೊಂದರೆಗೀಡಾಗಿದ್ದಾರೆ. ವಿದ್ಯಾರ್ಥಿಗೆ ವಾರ್ಷಿಕ 3.ಲಕ್ಷರೂ.  ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ವಾರ್ಷಿಕವಾಗಿ ಕರ್ನಾಟಕ ರಾಜ್ಯದಿಂದ ಸುಮಾರು 12.50 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಸೇರಿ ಒಟ್ಟು 270 ಕೋ.ರೂ. ಅನುದಾನ ನಿಗದಿಗೊಳಿಸಿದೆ. ಆದರೆ 2019-20ನೇ ಸಾಲಿನಲ್ಲಿ ರಾಜ್ಯ ಸರಕಾರ ಅಗತ್ಯ ಅನುದಾನ ಬಿಡುಗಡೆಗೊಳಿಸದೇ ಇರುವದರಿಂದ ಶೇ 50ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷದ ವಿದ್ಯಾರ್ಥಿ ವೇತನ ಪಡೆಯಲು ಸಾದ್ಯವಾಗಿಲ್ಲ. ಈಗಲೂ ಈ ವಿದ್ಯಾರ್ಥಿ ವೇತನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳದ್ದಾಗಿದೆ.

ಶುಲ್ಕ ವಿನಾಯತಿ ಯೋಜನೆಯು 1980 ರಿಂದ ರಾಜ್ಯದಲ್ಲಿ ಎಲ್ಲ ಹಿಂದುಳಿದ ವಿದ್ಯಾರ್ಥಿಗಳಿಗೆ ಜಾರಿಯಲ್ಲಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಪ್ರತ್ಯೇಕಗೊಂಡ ನಂತರ 2014 ರಿಂದ ಅರ್ಜಿ ಸಲ್ಲಿಸಿದ ಅಲ್ಪಸಂಖ್ಯಾತ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡುತ್ತಾ ಬರಲಾಗಿದೆ. ಆದರೆ, 2019 -20ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಈಗಲೂ ಅನುದಾನ ಬಿಡುಗಡೆಗೊಳಿಸದೇ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯನಮಾನವಾಗಿದೆ.

ಅದೇ ರೀತಿ ರಾಜ್ಯದಲ್ಲಿ ಎಲ್ಲ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 2014-15ನೇ ಸಾಲಿನಿಂದ ಮನೆಯಿಂದ ಹೊರಗಡೆಯಿದ್ದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆಂದೇ ಜಾರಿಗೊಳಿಸಿದ ವಿದ್ಯಾಸಿರಿ ಯೋಜನೆಯ 2019-20ನೇ ಸಾಲಿನ ಅನುದಾನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಬಿಡುಗಡೆಗೊಳಿಸದೇ ಇರುವುದರಿಂದ ಈ ಯೋಜನೆಯಡಿಯ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಅದೇ ರೀತಿ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಮೂಲಕ ಅನುಷ್ಠಾನ ಮಾಡಲಾಗುತ್ತಿರುವ ಅರಿವು ಶೈಕ್ಷಣಿಕ ಸಾಲದ ಯೋಜನೆ ಕೂಡಾ ಈ ವರ್ಷ ದಾರಿ ತಪ್ಪಿದೆ, ಈ ಯೋಜನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯದಂತಾಗಿದೆ.

ಅರಿವು ಯೋಜನೆಯ ಮೂಲಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಿಗಮದಿಂದ ನೀಡಲಾಗುತ್ತಿದ್ದ ಶೈಕ್ಷಣಿಕ ಸಾಲದಲ್ಲಿ ಈ ವರ್ಷ  ವಿದ್ಯಾರ್ಥಿಗಳು ಕೋರ್ಸುಗಳಿಗೆ ಪಾವತಿಸುವ ಮೊತ್ತದ ಅರ್ಧ ಮೊತ್ತ ಮಾತ್ರ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಸಾಲದ ರೂಪದಲ್ಲಿ ನೀಡುತ್ತಿದೆ. ಒಂದು ಕಡೆ ಪ್ರೋತ್ಸಾಹಧನ ಕಡಿತಗೊಳಿಸಿ, ಮತ್ತೊಂದು ಕಡೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನದ ಅನುದಾನ ಕಡಿತಗೊಳಿಸಿದ್ದಲ್ಲದೇ ಶುಲ್ಕವಿನಾಯತಿ, ವಿದ್ಯಾಸಿರಿ ಅನುದಾನವೂ ಸರಕಾರ ನೀಡುತ್ತಿಲ್ಲ, ಇದನ್ನು ಹೊರತುಪಡಿಸಿ, ಇದ್ದಂತಹ ಅರಿವು ಶೈಕ್ಷಣಿಕ ಸಾಲದ ಯೋಜನೆಯನ್ನು ಮೊಟುಕುಗೊಳಿಸಲು ಹೊರಟಿರುವುದು  ಅಲ್ಪಸಂಖ್ಯಾತ ಸಮುದಾಯದ ವಿರೋಧಿ ನೀತಿಯಾಗಿದೆ.

ಅನುದಾನ ಕಡಿತಗೊಳಿಸಲು ಕೋವಿಡ್-೧೯ ಕಾರಣವಿದ್ದರೂ ಯಾವುದೇ ಸರಕಾರ ಜನಪರ ಕಲ್ಯಾಣ ಇಲಾಖೆಗಳ ಯೋಜನೆಗಳನ್ನು ಕಡಿತಗೊಳಿಸುವದು ಆಡಳಿತಕ್ಕೆ ಮಾದರಿಯಾಗಲಾರದು ಎಂದು ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಸರಕಾರಕ್ಕೆ ತಿಳಿಸುವ ಮೂಲಕ ಕೀವಿಹಿಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here