ಆಳಂದ: ೨೦೨೦-೨೧ನೇ ಸಾಲಿನ ಅತಿವೃಷ್ಟಿ ಬೆಳೆ ಹಾನಿಯ ಬಾಕಿ ರೈತರ ಪರಿಹಾರವನ್ನು ಅವರ ಖಾತೆಗಳಿಗೆ ಜಮಾಕೈಗೊಳ್ಳಬೇಕು ಎಂದು ಕರುನಾಡ ವಿಜಯಸೇನೆ ತಾಲೂಕು ಅಧ್ಯಕ್ಷ ಗುರು ಬಂಗರಗಿ ಅವರು ಇಂದಿಲ್ಲಿ ಒತ್ತಾಯಿಸಿದರು.
ಪಟ್ಟಣದಲ್ಲಿ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರ ಮೂಲಕ ಕಾರ್ಯಕರ್ತರೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಅವರು ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಬೆಳೆಹಾನಿಯಾದ ಕುರಿತು ಎಲ್ಲ ರೈತರು ತಹಸೀಲ್ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಇಲಾಖೆಗಳಿಂದಲೇ ಹಾನಿಯ ಸರ್ವೆಕೈಗೊಂಡಿದ್ದು, ಆದರೆ ಕೆಲವರಿಗೆ ಹಾನಿಯ ಪರಿಹಾರ ಬಂದರೆ ಇನ್ನೂ ಸಾವಿರಾರು ರೈತರಿಗೆ ಪರಿಹಾರ ಮೊತ್ತವೆ ಬಂದಿಲ್ಲ. ಇದರಿಂದ ಸಂಕಷ್ಟದಲ್ಲಿರುವ ರೈತರು ಪರಿಹಾರಕ್ಕಾಗಿ ಎದುರು ನೋಡುವಂತಾಗಿದೆ. ಕೂಡಲೇ ಸರ್ಕಾರ ಪರಿಹಾರದ ಮೊತ್ತವನ್ನು ಬಿಡುಗಡೆಮಾಡಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರರು ಈ ಕುರಿತು ಈಗಾಗಲೇ ರೈತರ ಖಾತೆಗಳಿಗೆ ಹಣ ಜಮಾಕೈಗೊಳ್ಳಲಾಗುತ್ತಿದೆ. ಇನ್ನೂಳಿದವರ ಖಾತೆ ಹಣ ಮೇಲಿಂದಲೇ ಬರಲಿದ್ದು, ಬೇಡಿಕೆಯ ಕುರಿತು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸೇನೆ ಉಪಾಧ್ಯಕ್ಷ ಸಿದ್ದು ಹತ್ತರಕಿ, ಉಸ್ತುವಾರಿ ರವಿ ಪಟ್ಟಣಶೆಟ್ಟಿ, ಕಾರ್ಯಾಧ್ಯಕ್ಷ ಚನ್ನು ಪಾಟೀಲ, ಪ್ರವೀಣ ಮೊದಲೆ, ಚಿತಾನಂದ ಜಾಲತಾಣ, ಪಪ್ಪು ಪಟ್ಟಣಶೆಟ್ಟಿ, ಕುಮಾರ ಬಂಡೆ, ಲಾಲು ಖಾನಾಪೂರ, ಪ್ರಕಾಶ ಕದರಗಿ ಮತ್ತು ವಿನೋದ ಹೊದಲೂರ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.