ಸಂಪನ್ಮೂಲ ಸದ್ಬಳಕೆಯಾದರೆ ಉದ್ಯೋಗ ಸೃಷ್ಟಿ ಆಗುತ್ತದೆ : ಹೆಚ್.ಎಂ. ಶ್ರೀನಿವಾಸ

0
20

ಕಲಬುರಗಿ: ದೇಶದಲ್ಲಿ ಬಂಡವಾಳ ಹೂಡಿಕೆಗೆ ಸ್ಪರ್ಧೆ ಏರ್ಪಟ್ಟಿದೆ. ಸಂಪನ್ಮೂಲವನ್ನು ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡಿದರೆ ಹೆಚ್ಚು ಉದ್ಯೋಗ ಸೃಷ್ಟಿಸಬಹುದು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಹೆಚ್.ಎಂ. ಶ್ರೀನಿವಾಸ ಅವರು ಹೇಳಿದರು.

ಬುಧವಾರ ನಗರದ ಲುಂಬಿನಿಸ್ ಗ್ರ್ಯಾಂಡ್ ಹೊಟೇಲ್‍ನಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇತ್ತೀಚೆಗೆ ಜಾರಿಗೊಳಿಸಲಾದ ಪರಿಣಾಮಕಾರಿಯಾದ ಸುಧಾರಣೆಗಳ ನಂತರ ಘೋಷಿಸಲಾದ ಈ ಕೈಗಾರಿಕಾ ನೀತಿಯು, ರಾಜ್ಯವು ಉನ್ನತ ಮಟ್ಟದ ಕೈಗಾರಿಕಾ ಕಾರ್ಯಕ್ಷಮತೆ ಶ್ರೇಣಿಯನ್ನು ಸಾಧಿಸಲು ಸಹಾಯಕವಾಗಿದೆ. ವಿಶೇಷವಾಗಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ (ಎಂ.ಎಸ್.ಎಂ.ಇ)ಗಳಿಗೆ ಶೇಕಡ 10 ರಷ್ಟು ಹೂಡಿಕೆ ಉತ್ತೇಜನಾ ಸಹಾಯಧನ ಸಿಗಲಿದೆ. ಕೆ.ಎಸ್.ಎಫ್.ಸಿ. ಸಾಲಗಳಿಗೆ ಬಡ್ಡಿಯನ್ನು ಶೇಕಡ 6 ಕ್ಕೆ ಇಳಿಸುವುದು ಮತ್ತು ಎಂ.ಎಸ್.ಎಂ.ಇ.ಗಳಿಗೆ ಹೆಚ್ಚಿನ ಸಾಲ ಸೌಲಭ್ಯ ದೊರೆಯಲಿದೆ. ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶಗಳಲ್ಲಿ ಎಂ.ಎಸ್.ಎಂ.ಇ. ಗಳಿಗಾಗಿ ಶೇಕಡ 30 ರಷ್ಟು ನಿವೇಶನಗಳ ಮೀಸಲಾತಿ, ವಿದ್ಯುತ್ ತೆರಿಗೆ ಮನ್ನಾ, ಖಾಸಗಿ ವಲಯದಲ್ಲಿ ಕೈಗಾರಿಕಾ ಪಾರ್ಕ್‍ಗಳು, ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಕೈಗಾರಿಕಾ ಕ್ಲಸ್ಟರ್‍ಗಳ ಸ್ಥಾಪನೆ, ಕಾರ್ಮಿಕರ ಮಿತಿಯನ್ನು ಹೆಚ್ಚಿಸುವ ಸುಧಾರಣೆಗಳು ಹಾಗೂ ಕಾರ್ಖಾನೆಗಳ ಕಾಯ್ದೆಯಡಿ ಪಾಲಿಸಬೇಕಾದ ಅನುಸರಣೆಯಲ್ಲಿ ಪರಿಹಾರದ ಕುರಿತು ಅವರು ವಿವರಿಸಿದರು.

ತಂತ್ರಜ್ಞಾನ ಮತ್ತು ರಫ್ತು ಸಂಬಂಧಿತ ಕೈಗಾರಿಕೆಗಳಿಗೆ ಧನಸಹಾಯ, ಕೈಗಾರಿಕಾ ಉದ್ದೇಶಕ್ಕಾಗಿ ನಗರ ಮತ್ತು ಗ್ರಾಮೀಣ ಕಾನೂನುಗಳ ಸರಳೀಕರಣ, ಹೊಸ ತಂತ್ರಜ್ಞಾನ ಅಳವಡಿಕೆ ಪ್ಯಾಕೇಜ್, ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ತ್ಯಾಜ್ಯಘಟಕ ಸ್ಥಾಪನೆಗೆ ಅನುದಾನ, ಎಲೆಕ್ಟ್ರಿಕಲ್ ಹಾಗೂ ಪ್ಲಾಸ್ಟಿಕ್ ಮರುಬಳಕೆಗೆ ಸರ್ಕಾರ ಅನುದಾನ, ದೇಶಿಯ ವಸ್ತುಗಳು ವಿದೇಶಕ್ಕೆ ರಫ್ತು ಆರ್ಥಿಕತೆ ವೃದ್ಧಿ, ಕಾರ್ಯಕ್ಷಮತೆ ನೋಡಿ ಸಬ್ಸಿಡಿ ಹಾಗೂ ಕರಕುಶಲಕರ್ಮಿಗಳಿಗೆ ವಿಶೇಷ ಸೌಲಭ್ಯ ಈ ನೀತಿಯಲ್ಲಿ ನೀಡಲಾಗಿದೆ ಎಂದು ಹೇಳಿದರು.

ಹೊಸ ಕೈಗಾರಿಕಾ ನೀತಿಯಲ್ಲಿ ಸಾಮಾನ್ಯ ಮತ್ತು ವಿಶೇಷ ಪ್ರವರ್ಗವಾಗಿ ಅನುದಾನ ನೀಡಲಾಗುವುದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೆ, ವಿಶೇಷಚೇತನರಿಗೆ, ಮಾಜಿ ಸೈನಿಕರಿಗೆ, ಮಹಿಳೆಯರಿಗೆ ಶೇ. 75 ರಷ್ಟು ಅನುದಾನ ನೀಡಲಾಗುತ್ತಿದೆ. ಸಾರ್ಥಕ ಯೋಜನೆಯು ಅಭಿವೃದ್ಧಿ ಹಂತದಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು 2020-25ರ ನೀತಿಯಲ್ಲಿ ಇರುವ ಅನೇಕ ಸೌಲಭ್ಯಗಳ ಕುರಿತು ತಿಳಿಸಿದರು.

ಒಟ್ಟಾರೆ 5 ವರ್ಷದಲ್ಲಿ 5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುವ ಮೂಲಕ 20 ಲಕ್ಷ ಉದ್ಯೋಗ ಸೃಷ್ಟಿಯ ಅವಕಾಶ ದೊರೆಯಲಿದೆ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ್ ವಿ. ರಘೋಜಿ, ಕಾರ್ಯದರ್ಶಿ ಶಶಿಕಾಂತ ಪಾಟೀಲ, ಕಾಸಿಯಾ ನಗರ ಜಂಟಿ ಕಾರ್ಯದರ್ಶಿ ಪಿ.ಎನ್. ಜೈಕುಮಾರ್, ಖಜಾಂಚಿ ಎಸ್. ಶಂಕರನ್, ಕಾಸಿಯಾ ಗ್ರಾಮೀಣಾಭಿವೃದ್ಧಿ ಪ್ಯಾನಲ್ ಚೇರ್ಮನ್ ಭೀಮಾಶಂಕರ ಬಿ. ಪಾಟೀಲ, ಕೌಶಲ್ಯ ಪ್ಯಾನಲ್ ಕಾರ್ಯದರ್ಶಿ ಸುದರ್ಶನ ಸೇರಿ ಜಿಲ್ಲೆಯ ಅನೇಕ ಕೈಗಾರಿಕೆಗಳ ಮಾಲೀಕರು ಹಾಗೂ ಸ್ಟಾರ್ಟಪ್ ಉದ್ದಿಮೆದಾರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here