ಮಂಡ್ಯ: ನಾಡೋಜ ಹಂಪನಾ ಅವರನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ವರಿಷ್ಠಾ ಪೊಲೀಸ್ ಅಧಿಕಾರಿ ವಿಷಾದ ವ್ಯಕ್ತಪಡಿಸಿ ಸೂಕ್ತ ಕ್ರಮ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಕುರಿತು ಹಂಪನಾ ಅವರಿಗೆ ಪತ್ರ ಬರೆದಿರುವ ವರಿಷ್ಠಾಧಿಕಾರಿ, ಠಾಣೆಯಲ್ಲಿ ಸಾಹಿತಿ ವಿರುದ್ಧ ದೂರು ದಾಖಲಾಗಿರುವ ವಿಚಾರ ಗಮನಕ್ಕೆ ತರಲಾಗದೆ ಈ ಘಟನೆ ನಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿ ವಿರುದ್ಧ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಮಂಡ್ಯ ಜಿಲ್ಲೆಯ ಉಪವಿಭಾಗದ ಡಿ.ಎಸ್.ಪಿ ಸೂಚಿಸಲಾಗಿದ್ದು, ವರದಿಯನ್ನಾಧರಿಸಿ ಇಲಾಖೆಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.
ಇಲಾಖೆಯಿಂದ ಆದ ಅನಗತ್ಯ ತೊಂದರೆ ಮತ್ತು ಮಾನಸಿಕವಾಗಿ ಘಾಸಿಗೊಳ್ಳುವಂತೆ ಮಾಡಿದ ಘಟನೆಗೆ ವೈಯಕ್ತಿಕ ಹಾಗೂ ಇಲಾಖೆ ಪರವಾಗಿ ತೀವ್ರವಾದ ವಿಷಾದ ವ್ಯಕ್ತಪಡಿಸಿರುವುದಾಗಿ ಸಾಹಿತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸಾಹಿತ್ಯಿಕ ಸಭೆಯಲ್ಲಿ ಸರಕಾರವನ್ನು ಟೀಕಿಸಿದ್ದಕ್ಕಾಗಿ ಪೋಲಿಸರು ಹಿರಿಯ ಸಾಹಿತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಾಕ್ತವಾಗಿತು. ವಿವಿಧ ಪ್ರಗತಿ ಪರ ಸಂಘಟನೆಗಳು ಕ್ರಮಕ್ಕೆ ಆಗ್ರಹಿಸಿದವು.