ಕಲಬುರಗಿ: ನಾವು ಯಾವುದೇ ಧರ್ಮ ಆಚರಿಸಿದರೂ ಗೌತಮ ಬುದ್ಧರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದುಶಾಸಕ ಪ್ರಿಯಾಂಕ್ ಎಂ. ಖರ್ಗೆ ಅಭಿಪ್ರಾಯಪಟ್ಟರು.
ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಡಾ. ಚಂದ್ರಶೇಖರ ದೊಡ್ಡಮನಿ ಅವರ ಸುವರ್ಣ ಮಹೋತ್ಸವ ನಿಮಿತ್ತ ಧ್ಯಾನಶೀಲ ಕೃತಿ ಲೋಕಾರ್ಪಣೆ ಹಾಗೂ ಮಹಾಬೋಧಿ ಪ್ರಕಾಶನ 12ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಗವಾನ್ ಬುದ್ಧ ನ ಮಾತುಗಳು ಡಾ. ಬಾಬಾ ಸಾಹೇಬ ಅಂಬೇಡ್ಕರಿಗೆ ಪ್ರೇರಣೆಯಾಗಬೇಕಾದರೆ ಎರಡು ದಶಕ ಬೇಕಾಯಿತು. ಎಲ್ಲ ಧರ್ಮಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಸಮಾನತೆ, ಸ್ವಾಭಿಮಾನದ ಬದುಕಿಗೆ ಮತಾಂತರ ಅಗತ್ಯ. ಬುದ್ಧ ನ ಮಾರ್ಗದಲ್ಲಿ ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಇದೆ ಎಂದು ತಿಳಿದು ಕೊನೆಗೆ ಬೌದ್ಧ ಧರ್ಮ ಸೇರುತ್ತಾರೆ ಎಂದು ವಿವರಿಸಿದರು.
ಪುಣೆಯ ಬೌದ್ಧ ಸಾಹಿತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುಣೆಯ ವಿಜಯ ಕಾಂಬಳೆ ಮಾತನಾಡಿ, ವಿಚಾರಗಳ ಪ್ರಚಾರಕ್ಕಾಗಿ ತಮ್ಮ ಇಡೀ ಜೀವನ ಸವೆಸಿದ ಬುದ್ಧನ ಸಂದೇಶಗಳು ಬಹುಜನ ಹಿತಾಯ; ಬಹುಜನ ಸುಖಾಯ ಎನ್ನುವಂತಿವೆ. ಬುದ್ಧನ ಈ ತತ್ವಗಳನ್ನು ಪ್ರಚಾರ ಮಾಡುವ ಪ್ರಸಾರ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಭಗವಾನ್ ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಪಾಲಿಸುತ್ತಿಲ್ಲ ಎಂದು ವಿಷಾದಿಸಿದ ಅವರು, ನಾವು ಬದಲಾದರೆ ಸಮಾಜ ಖಂಡಿತ ಬಸಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಯಾವುದೇ ಪ್ರಶ್ನೆಗಳನ್ನು ಕೇಳಿದರೆ ದೇಶ ದ್ರೋಹದ ಪಟ್ಟ ಕಟ್ಟುವ ಸಂದಿಗ್ಧ ಪರಿಸ್ಥಿತಿ ನಮ್ಮ ದೇಶದಲ್ಲಿ ಉಂಟಾಗಿದೆ. ಇದರ ವಿರುದ್ಧ ರಾಜಕಾರಣಿಗಳಾದ ನಾವು ಪ್ರತಿಭಟನೆ ಮಾಡಿದರೆ ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ. ಹೀಗಾಗಿ ಪ್ರಗತಿಪರ ವಿಚಾರಧಾರೆಯ ಬರಹಗಾರ, ಲೇಖಕರು ಈ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಬೇಕು. -ಪ್ರಿಯಾಂಕ್ ಎಂ. ಖರ್ಗೆ, ಶಾಸಕ
ಕೃತಿ ಕುರಿತು ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ ಪ್ರೊ. ಬಸವರಾಜ ಡೋಣೂರ ಮಾತನಾಡಿ, ಈ ಕೃತಿಯಲ್ಲಿ ಒಟ್ಟು 24 ಅಮೂಲ್ಯ , ಸಂಶೋದನಾರ್ಥಿಗಳಿಗೆ ಇದೊಂದು ಆಕರ ಗ್ರಂಥವಾಗಿದೆ. ಬುದ್ಧನ ಜ್ಞಾನೋದಯದಿಂದ ಹಿಡಿದು ಅವರ ಅದ್ಭುತವಾದ ಚೆತೋಹಾರಿ ಬೋಧನೆಗಳನ್ನು ಈ ಕೃತಿಯಲ್ಲಿ ಹಿಡಿದಿಡಲಾಗಿದೆ ಎಂದು ತಿಳಿಸಿದರು.
ಡಾ. ಚಂದ್ರಶೇಖರ ದೊಡ್ಡಮನಿಯವರ ಅಭಿನಂದನ ಗ್ರಂಥ ಇದಾಗಿದ್ದರೂ ಕೇವಲ ಒಂದೇ ಒಂದು ಲೇಖನ ಮಾತ್ರ ಇವರ ಕುರಿತಾಗಿದ್ದು, ಉಳಿದ 24 ಲೇಖನಗಳು ಬುದ್ಧನ ಬೆಳಕಿನ ಕುರಿತಾದ ಚರ್ಚೆ ಈ ಕೃತಿಯಲ್ಲಿದೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಡಾ. ಸುರೇಶ ಎಲ್. ಶರ್ಮಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಿಪಂ ಮಾಜಿ ಸದಸ್ಯ, ಹಿರಿಯ ಮುಖಂಡ ಮಾಪಣ್ಣ ಗಂಜಿಗೇರಿ, ಜಿ.ಪಂ. ಮಾಜಿ ಸದಸ್ಯ ಭೀಮರಾವ ಟಿ. ತೇಗಲತಿಪ್ಪಿ, ಜ್ಯೋತಿ ಚಂದ್ರಶೇಖರ ದೊಡ್ಡಮನಿ ವೇದಿಕೆಯಲ್ಲಿದ್ದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಜ್ಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.
ಇದೇವೇಳೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಂತಾಬಾಯಿ ನೆಲೋಗಿ ಹಾಗೂ ಸ್ವಾತಿ ಇವರನ್ನು ಪ್ರೋತ್ಸಾಹಧನ ನೀಡಿ
ಸನ್ಮಾನಿಸಲಾಯಿತು. ಯಶವಂತ ಸಿಂಧೆ, ದೇವನಗೌಡ ಪಾಟೀಲ, ವಿಠ್ಠಲ ಚಿತ್ತಕೋಟೆ, ಡಾ. ರವೀಂದ್ರನಾಥ ಹೊಸಮನಿ, ಅರುಣಕುಮಾರ ಪಾಟೀಲ, ಶ್ಯಾಮನಾಟೆಕರ್, ಶಿವಾಜಿ ಪಾಟೀಲ, ಅಜಯ ಮಡಪೆ, ಸತೀಶ ಸಜ್ಜನ್, ಡಾ. ಕೃಷ್ಣಮೂರ್ತಿ, ಶಾಂತಗೌಡ ಪಾಟೀಲ, ಅಂಬಣ್ಣ ಜೀವಣಗಿ ಮುಂತಾದವರು ವಿಶೇಷ ಆಹ್ವಾನಿತರಾಗಿದ್ದರು.
ಡಾ. ಸೂರ್ಯಕಾಂತ ಸುಜ್ಯಾತ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಕುಲಕರ್ಣಿ ನಿರೂಪಿಸಿದರು. ಸಿದ್ಧಾರ್ಥ ಚಿಮ್ಮಾ ಇದಲಾಯಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.