ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸೇವೆ ಶ್ಲಾಘನೀಯ: ಡಾ. ಸತ್ಯಂಪೇಟೆ

0
58

ಕಲಬುರಗಿ: ಜನರಿಂದ ಜನರಿಗೆ ನೆರವು ಎಂಬ ಕಲ್ಪನೆಯೊಂದಿಗೆ ಜಾಗತಿಕ ಮಟ್ಟದಲ್ಲಿ 1863ರಲ್ಲಿ ಆರಂಭವಾದ ರೆಡ್ ಕ್ರಾಸ್ ಸಂಸ್ಥೆ ಭಾರತದಲ್ಲಿ 1920ರಲ್ಲಿ ಸ್ಥಾಪಿತವಾಗಿದ್ದು, ಇದೀಗ ಸಂಸ್ಥೆಗೆ ನೂರು ವರ್ಷ ತುಂಬಿದೆ ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ  ಶಹಬಾಜಾರ್ ನ ಸುವರ್ಣ ನಗರದಲ್ಲಿರುವ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರವೇ ರಾಜ್ಯಾದ್ಯಕ್ಷ ಎಚ್. ಶಿವರಾಮೇಗೌಡ ಜನ್ಮ ದಿನದ ಪ್ರಯುಕ್ತ ಸೋಮವಾರ ಹಮ್ಮಿಕೊಂಡ ಆರೋಗ್ಯ ತಪಾಸಣಾ ಶಿಬಿರ ಹಾಗೂ ದ.ರಾ. ಬೇಂದ್ರೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,  ಇಂತಹ ಮಾನವೀಯ ಸೇವಾ ಸಂಘಟನೆ ವತಿಯಿಂದ ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿಪತ್ತು ನಿರ್ವಹಣೆ ಮುಂತಾದ ಮಾನವೀಯ ಸೇವಾ ಕಾರ್ಯ ಹಮ್ಮಿಕೊಂಡಿರುವುದು ಸ್ತುತ್ಯರ್ಹ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ತಮ್ಮ ಆಡು ನುಡಿಯಲ್ಲೇ ಜಾನಪದ ಶೈಲಿಯ ಕಾವ್ಯ ರಚಿಸಿದ ವರಕವಿ ದ.ರಾ. ಬೇಂದ್ರೆ ಅವರು ಕನ್ನಡದಲ್ಲಿ ಕಾವ್ಯ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದಾರೆ. ಮರಾಠಿ ವಲಯದಲ್ಲಿ ಬೆಳೆದಿದ್ದರೂ ಕನ್ನಡದ ಬಗ್ಗೆ ಅವರಿಗೆ ಬದ್ಧತೆ ಇತ್ತು. ಅಂತೆಯೇ ಅವರನ್ನು ಶ್ರಾವಣ ಪ್ರತಿಭೆ, ಕಾವ್ಯ ಗಾರುಡಿಗ ಎಂದು ಕರೆಯಲಾಗುತ್ತಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಕುರಿತು ಪಾಲಕರು ಹಾಗೂ ಶಿಕ್ಷಕರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಅತಿಥಿಗಳಾಗಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಲಬುರಗಿ ಸಭಾಪತಿ ಅಪ್ಪಾರಾವ ಅಕ್ಕೋಣಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಶಾಬಾದಿ ವೇದಿಕೆಯಲ್ಲಿ ಇದ್ದರು. ಶಾಲೆಯ ಮುಖ್ಯೋಪಾಧ್ಯಾಯ ಸಂಜಯ ಸಮಾಣೆ ಅಧ್ಯಕ್ಷತೆವಹಿಸಿದ್ದರು. ಮಂಜುನಾಥ ನಾಲವಾರಕರ್ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದ ನಂತರ ಯುನೈಟೆಡ್ ಆಸ್ಪತ್ರೆಯ ಡಾ. ಶಿವಶಂಕರ, ಆರೋಗ್ಯ ಇಲಾಖೆಯ ರಾಕೇಶ ಹಾಗೂ ಸಿಬ್ಬಂದಿ ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯ ತಪಾಸಣೆ ನಡೆಸಿದರು.

ಇದೇವೇಳೆಯಲ್ಲಿ ಬೇಂದ್ರೆ ಅವರ ಜನ್ಮ ದಿನದ ಪ್ರಯುಕ್ತ  ವೆಂಕಟೇಶ ಜನಾದ್ರಿ, ಸಿದ್ಧರಾಮ ತಾಜಮಾನೆ, ಡಾ. ರಾಜಶೇಖರ ಮಾಂಗ್, ಡಾ. ಶರಣಬಸಪ್ಪ ವಡ್ಡನಕೇರಿ ಅವರಿಗೆ ಬೇಂದ್ರೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here