ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಮುನ್ನ ಮುಂಜಾಗ್ರತಾ ಕ್ರಮ ಅವಶ್ಯಕ

0
20

ಕಲಬುರಗಿ: ಮನುಷ್ಯನಿಗೆ ಜೀವ ತುಂಬಾ ಮುಖ್ಯ. ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಮುನ್ನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಹೇಳಿದರು.

ಸೋಮವಾರ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮ್ಯಾನವೇಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ-2013ರ ಅನುಷ್ಠಾನ ಮತ್ತು ಪುನರ್ವಸತಿ ಕುರಿತು ಸಫಾಯಿ ಕರ್ಮಚಾರಿಗಳಿಗೆ ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳಿಗೆ ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಅಗತ್ಯವಿರುವ ಸುರಕ್ಷತಾ ವಸ್ತುಗಳನ್ನು ಬಳಸಿಕೊಂಡು ಕಾರ್ಯನಿರ್ವಹಣೆ ಮಾಡಬೇಕು. ಸರಕ್ಷತಾ ಪರಿಕರವಿಲ್ಲದೆ ಕೆಲಸ ಮಾಡುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಈ ವರ್ಗದ ಕಾರ್ಮಿಕರಿಗೆ ಸರ್ಕಾರದ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಪೌರ ಕಾರ್ಮಿಕರಿಗೆ ಕರೆ ನೀಡಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯೆ ಗೀತಾ ವಾಡೇಕರ್ ಅವರು ಮಾತನಾಡಿ, ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರು ತಮ್ಮ ಕೆಲಸ ಏನೆಂದು ತಿಳಿದುಕೊಂಡು ಕಾರ್ಯನಿರ್ವಹಣೆ ಮಾಡಬೇಕು. ಇಂದಿನ ತರಬೇತಿಯಿಂದ ಸಫಾಯಿ ಕರ್ಮಚಾರಿಗಳಿಗೆ ತುಂಬಾ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಸಿ.ಪಿ. ಕಿಶೋರ ಬಾಬು ಮಾತನಾಡಿ ಮ್ಯಾನ್ವಲ್ ಸ್ಕ್ಯಾವೆಂಜಿಂಗ್ ಕಾಯ್ದೆ ವಿರುದ್ಧವಾಗಿ ಯಾರೇ ಕಾನೂನು ಬಾಹಿರವಾಗಿ ಕೆಲಸ ಮಾಡಿಸಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನಿನ ಬಗ್ಗೆ ಎಲ್ಲರು ತಿಳಿದುಕೊಳ್ಳುವುದು ಒಳಿತು ಎಂದರು.

ರಾಜ್ಯ ಮೇಲ್ವಿಚಾರಣೆ ಸಮಿತಿ ಸದಸ್ಯ ಹಾಗೂ ರಾಜ್ಯ ಸಂಚಾಲಕ ಡಾ. ಕೆ.ಬಿ ಓಬಳೇಶ ಅವರು ಮಾತನಾಡಿ, ಮ್ಯಾನ್ವಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ-2013 ಪ್ರಕಾರ ಯಾರನ್ನೂ ಬಲವಂತವಾಗಿ ಮ್ಯಾನ್‍ಹೋಲ್‍ಗೆ ಇಳಿಸಿ ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಇದನ್ನು ಉಲ್ಲಂಘಿಸಿದಲ್ಲಿ ಕಾಯ್ದೆಯನ್ವಯ ಅಂತಹವರನ್ನು ಶಿಕ್ಷೆಗೆ ಗುರಿ ಪಡಿಸಬಹುದಾಗಿದೆ ಎಂದರು.

ಮ್ಯಾನ್ವಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ-2013ರ ಸೆಕ್ಷನ್-4 (ಎ) (ಬಿ) (ಸಿ) ಪ್ರಕಾರ ಗ್ರಾಮೀಣ, ಪಟ್ಟಣ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಯಲ್ಲಿರುವ ಅರೆ ನೈರ್ಮಲ್ಯ ಶೌಚಾಲಯಗಳನ್ನು ಗುರುತಿಸಿ ನಾಶ ಮಾಡಬೇಕು. ಸೆಕ್ಷನ್-4 (2) (1) ಪ್ರಕಾರ ತೆರೆದ ಶೌಚಾಲಯಗಳು ಕಂಡು ಬಂದಲ್ಲಿ ದಂಡ ವಿಧಿಸಲಾಗುತ್ತದೆ. ಸೆಕ್ಷನ್ 5 ಮತ್ತು 7ರ ಪ್ರಕಾರ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಯಾರನ್ನು ಮ್ಯಾನ್‍ಹೋಲ್ ಶುಚಿಗೊಳಿಸಲು ಇಳಿಸಬಾರದು. ಸೆಕ್ಷನ್ 8, 9ರ ಪ್ರಕಾರ ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದರೆ 50 ಸಾವಿರ ರೂ. ದಂಡ, ಎರಡನೇ ಬಾರಿಗೆ 1 ಲಕ್ಷ ರೂ. ದಂಡ ಹಾಗೂ 2 ವರ್ಷ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ ಎಂದು ಕಾಯ್ದೆ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಮೇಲ್ವಿಚಾರಣೆ ಸಮಿತಿ ಸದಸ್ಯ ರಾಮಚಂದ್ರ ಅವರು ಕಾಯ್ದೆ ಕುರಿತು ಸಫಾಯಿ ಕರ್ಮಚಾರಿಗಳಿಗೆ ಸಮಗ್ರ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಸಹಾಯಕ ಆಯುಕ್ತ ಬಲರಾಮ ಲಮಾಣಿ, ಬೆಂಗಳೂರಿನ ರಾಜ್ಯ ಕಾನೂನು ಮಹಾವಿದ್ಯಾಲಯದ ಡಾ. ಆರ್. ವಿ ಚಂದ್ರಶೇಖರ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಅನೀಲಕುಮಾರ ಚಕ್ರ ಸೇರಿದಂತೆ ನಗರ ಸ್ಥಳೀಯ ಸಂಸಸ್ಥೆಗಳ ಅಧಿಕಾರಿ-ಸಿಬ್ಬಂದಿಗಳು, ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರು ಮತ್ತಿತರರು ಉಪಸ್ಥಿತರಿದ್ದರು.

ಆರ್.ಜೆ ಮಂಜು ನಿರೂಪಣೆ ಮಾಡಿದರು. ಡಿಯುಡಿಸಿ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗೇರಿ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here