ಬೆಂಗಳೂರು: ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಾಡುವ ‘ಪ್ರಬುದ್ಧ’ ಯೋಜನೆಯಡಿ ಎರಡನೆ ಹಂತದಲ್ಲಿ ಹದಿಮೂರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ತಮ್ಮ ಕಚೇರಿಯಲ್ಲಿ ಆಯ್ಕೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ 13 ಅಭ್ಯರ್ಥಿಗಳ ಮೊದಲ ಎರಡು ಸೆಮಿಸ್ಟರ್’ಗಳಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ 9.53 ಕೋಟಿ ರೂ. ವೆಚ್ಚವನ್ನು ಭರಿಸುತ್ತಿದೆ. ಎರಡು ತಿಂಗಳ ಹಿಂದಷ್ಟೆ ಉಪ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಂಡಿದ್ದ ಈ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ ಏಳು ಅಭ್ಯರ್ಥಿಗಳು ಆಯ್ಕೆಯಾಗಿದ್ದು ಈಗಾಗಲೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಲಿದ್ದಾರೆ.
ಎರಡನೆ ತಂಡದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳು ಹಾಗೂ ಅವರ ಪೋಷಕರನ್ನು ಸಮಾಜ ಕಲ್ಯಾಣ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಶುಭಹಾರೈಸಿ, ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯದಂತೆ ಶೈಕ್ಷಣಿಕ ಪ್ರಗತಿಯೊಂದಿಗೆ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜೀವನ ನಿರ್ವಹಣೆಗೆ ಮನೆ ಕೆಲಸ ಮಾಡಿಕೊಂಡು ದುಡಿದು ಮಗನ ವ್ಯಾಸಂಗಕ್ಕೆ ಕಾರಣರಾದ ಬೆಂಗಳೂರು ಚೋಳರಪಾಳ್ಯದ ಶ್ರೀಮತಿ ಕೆ.ಕಮಲ ತಮ್ಮ ಪುತ್ರ ಎಂ.ಮೋಹನ್ ಪ್ರಬುದ್ಧ ಯೋಜನೆಯಡಿ ಆಯ್ಕೆಗೊಂಡು ಕೆನಡಾ ದೇಶಕ್ಕೆ ಎಂಜನಿಯರಿಂಗ್ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಹೊರಟಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರಲ್ಲದೆ, ಸಮಾಜ ಕಲ್ಯಾಣ ಇಲಾಖೆ ಪ್ರಬುದ್ಧ ಯೋಜನೆಯನ್ನು ಜಾರಿಗೆ ತರುವ ಮೂಲಕ ಬಡ ಜನರ ಉನ್ನತ ವ್ಯಾಸಂಗ ಮಾಡುವ ಕನಸುಗಳನ್ನು ನನಸು ಮಾಡಿದೆ ಎಂದು ಹೇಳಿದರು.
ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಹೊರಟಿರುವ 13 ಅಭ್ಯರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಪ್ರಬುದ್ಧ ಯೋಜನೆಯಡಿ ಇದುವರೆಗೂ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ಕಳುಹಿಸಲಾಗಿದೆ.
ಮೊದಲ ಹಂತದಲ್ಲಿ 13.11 ಕೋಟಿ ರೂ.ಗಳನ್ನು ವೆಚ್ಚವಾಗಿ ಭರಿಸಲಾಗಿದೆ.