ನೂರಾರು ಮಂದಿ ರೈತರು ಕೊರೆಯುವ ಚಳಿಯಲ್ಲಿ ಸತ್ತೇ ಹೋದರು. ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್, ಅಜಯ ದೇವಗನ್, ಕರಣ್ ಜೋಹರ್, ಏಕ್ತಾ ಕಪೂರ್ ಇತ್ಯಾದಿಗಳು ಬಾಯಿ ತೆರೆಯಲಿಲ್ಲ. ಅವರ ಹೃದಯಗಳು ಕರಗಲಿಲ್ಲ. ರೈತರ ಪ್ರತಿಭಟನೆಯನ್ನು ಬೆಂಬಲಿಸುವುದು ಬೇಡ, ದಿಲ್ಲಿ ಗಡಿಯಲ್ಲಿ ನಿಂತು ಆತ್ಮಾರ್ಪಣೆ ಮಾಡಿಕೊಂಡ ಅನ್ನದಾತರಿಗಾಗಿ ಒಂದೇ ಒಂದು ಸಾಲು ಬರೆಯಲಿಲ್ಲ ಈ ಬೇವರ್ಸಿಗಳು. ರೈತರ ಮೇಲೆ ದಾಳಿಗಳಾದವು. ರೈತ ಮುಖಂಡರ ಮೇಲೆ ಸುಳ್ಳು ಮೊಕದ್ದಮೆಗಳು ದಾಖಲಾದವು. ಪತ್ರಕರ್ತರ ಮೇಲೆ ದೇಶದ್ರೋಹದ ಕೇಸು ಹೂಡಲಾಯಿತು. ಗ್ರೌಂಡ್ ಜೀರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತ್ರಕರ್ತರನ್ನು ಬಂಧಿಸಿ ಜೈಲಿಗಟ್ಟಲಾಯಿತು. ರೈತರ ದಾರಿಯಲ್ಲಿ ಉದ್ದುದ್ದ ಮೊಳೆಗಳನ್ನು ಹೂಡಿ, ರಸ್ತೆಗಳನ್ನು ಶಾಶ್ವತವಾಗಿ ಮುಚ್ಚಲಾಯಿತು. ಇದೆಲ್ಲ ಆದಾಗ ಇವರ ಬಾಯಿಗಳಿಗೆ ಲಕ್ವ ಹೊಡೆದಿತ್ತು, ಯಾರೂ ಮಾತನಾಡಲಿಲ್ಲ.
ಈಗ ದಿಢೀರನೆ ಇವರೆಲ್ಲ ಬಾಯಿ ತೆರೆದಿದ್ದಾರೆ. ಇದು ನಮ್ಮ ದೇಶದ ಆಂತರಿಕ ವಿಷಯ, ಬೇರೆಯವರು ಮೂಗು ತೂರಿಸಬಾರದು ಎಂದು ಫರ್ಮಾನು ಹೊರಡಿಸುತ್ತಿದ್ದಾರೆ. ಫೈನ್ ಒಪ್ಪಿಕೊಳ್ಳೋಣ. ಆದರೆ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂದು ಘೋಷಿಸಿದಾಗ ಅದು ಬೇರೆ ದೇಶದ ಆಂತರಿಕ ವಿಷಯ ಎಂದು ಈ ಕುನ್ನಿಗಳಿಗೆ ಅನಿಸಿರಲಿಲ್ಲವೇ? ಅಷ್ಟೇಕೆ ಜಾರ್ಜ್ ಫ್ಲಾಯ್ಡ್ ದುರ್ಘಟನೆ ನಡೆದಾಗ ಇವರೆಲ್ಲ ಇದೇ ಟ್ವಿಟರ್ ನಲ್ಲಿ ಕಣ್ಣೀರು ಹಾಕಿದರಲ್ಲ, ಆಗ ಅದು ಅಮೆರಿಕದ ಆಂತರಿಕ ವಿಷಯ ಎಂಬುದು ಗೊತ್ತಿರಲಿಲ್ಲವೇ? ಅದೆಲ್ಲ ಹೋಗಲಿ, ಮೊನ್ನೆಮೊನ್ನೆ ಅಧಿಕಾರ ಹಸ್ತಾಂತರ ನಡೆಸಲು ಇಚ್ಛೆಯಿಲ್ಲದೆ ಟ್ರಂಪ್ ಬೆಂಬಲಿಗರು ವಾಷಿಂಗ್ ಟನ್ ನಲ್ಲಿ ಸಂಸತ್ ಮೇಲೆ ದಾಳಿ ನಡೆಸಿದಾಗ ಇದೇ ನರೇಂದ್ರ ಮೋದಿ ಟ್ವೀಟ್ ಮಾಡಿ ಖಂಡಿಸಿದರಲ್ಲ, ಅದು ಅಮೆರಿಕದ ಆಂತರಿಕ ವಿಷಯವಾಗಿರಲಿಲ್ಲವೇ?
ಒಬ್ಬ ಪಾಪ್ ಗಾಯಕಿ ರಿಹಾನಾ, ಪರಿಸರವಾದಿ ಗ್ರೇಟಾ ಮತ್ತು ಅವರ ಬೆನ್ನಲ್ಲೇ ಜಗತ್ತಿನ ನೂರಾರು ಸೆಲೆಬ್ರಿಟಿಗಳು ರೈತರ ಪರವಾಗಿ ಧ್ವನಿ ಎತ್ತಿದ ಕೂಡಲೇ ಇವರಿಗೆ ಉರಿಯೋದಕ್ಕೆ ಶುರುವಾಗಿದ್ದು ಯಾಕೆ? ಇಂಡಿಯಾದಿಂದ ಹೊರಗೆ ಎಲ್ಲೇ ಏನೇ ನಡೆದರೂ ನಾವು ಒಂದೇ ಒಂದು ಮಾತೂ ಆಡುವುದಿಲ್ಲ ಎಂದು ಇವರು ಪ್ರತಿಜ್ಞೆ ಮಾಡಲು ಸಿದ್ಧರಿದ್ದಾರೆಯೇ?
ರೈತರು ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ರೈತರೇ, ಅನ್ನದಾತರೇ. ಅವರಿಗಾಗಿ ಮಿಡಿಯುವುದು ಮನುಷ್ಯಧರ್ಮ. ಇಷ್ಟು ಸಾಮಾನ್ಯ ಜ್ಞಾನ ಇಲ್ಲದ ಇವರು ಹೊಟ್ಟೆಗೆ ಅನ್ನವನ್ನಂತೂ ತಿನ್ನಲಾರರು.
ಚೆಗುವಾರನ ಮಾತು ನೆನಪಾಗುತ್ತದೆ. “ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯದ ವಿರುದ್ಧ ನಿನ್ನ ಎದೆ ಕಂಪಿಸಿದರೆ ನೀನು ನನ್ನ ಸಂಗಾತಿ” ರಿಹಾನರಿಂದ ಹಿಡಿದು ಇಂದು ರೈತರ ಪರವಾಗಿ ಧ್ವನಿ ಎತ್ತುತ್ತಿರುವ ಎಲ್ಲರೂ ನಮ್ಮ ಸಂಗಾತಿಗಳೇ ಆಗಿದ್ದಾರೆ. ಈ ನಯವಂಚಕ ಬಾಲಿವುಡ್ ಸೆಲೆಬ್ರಿಟಿ, ಕ್ರಿಕೆಟ್ ತಾರೆಗಳು ಇತಿಹಾಸದಲ್ಲಿ ” ಜನದ್ರೋಹಿ”ಗಳೆಂದೇ ನೆನೆಯಲ್ಪಡುತ್ತಾರೆ, ಅದು ನಿಶ್ಚಿತ.
– ದಿನೇಶ್ ಕುಮಾರ್ ಎಸ್.ಸಿ.