ಕಲಬುರಗಿ: ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ಸ್ಥಾಪನೆಗೆ ಯಾವುದೇ ಬೇಡಿಕೆ ಇಲ್ಲದೆ ನಿಸ್ವಾರ್ಥ ಭಾವನೆಯಿಂದ ಯಥಾರ್ಥವಾಗಿ ಸ್ಥಳಿಯ ರೈತರು ಭೂಮಿ ನೀಡಿರುವುದು ಮಹತ್ತರದ ರಚನಾತ್ಮಕ ಕೆಲಸವಾಗಿದ್ದು, ಈಗ ಸಿ.ಯು.ಕೆ.ಯಿಂದ 100 ಕೋಟಿ ಹಣ ವೆಚ್ಚ ಮಾಡಿ ಎಕ್ಸಲೆನ್ಸ್ ಸೆಂಟರ (ಸಂಶೋಧನಾ ಕೇಂದ್ರ) ಕಲಬುರಗಿಯ ಸಿ.ಯು.ಕೆ.ಯ ವಿಶ್ವವಿದ್ಯಾಲಯದಲ್ಲಿ ಆರಂಭಿಸುವ ಬದಲು ಬೆಂಗಳೂರಿನಲ್ಲಿ ಸ್ಥಳಾಂತರ ಮಾಡಿ ಅಲ್ಲಿ ಆರಂಭಿಸುತ್ತಿರುವುದು ಖಂಡನಿವಾಗಿದೆ ಎಂದು ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಲಕ್ಷ್ಮಣ ದಸ್ತಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ಹಿಂದುಳಿಯುವಿಕೆಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ೩೭೧ನೇ (ಜೆ) ಕಲಂನ ವಿಶೇಷ ಸ್ಥಾನಮಾನ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಕೇಂದ್ರ ರಾಜ್ಯ ಸರಕಾರದ ಇಚ್ಛಾಶಕ್ತಿಯಿಂದ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ಜಿಲ್ಲೆಯ ಕಡಗಂಚಿಯಲ್ಲಿ ಅಸ್ತಿತ್ವಕ್ಕೆ ಬಂದು ೧೦ ವರ್ಷಗಳು ಗತಿಸಿವೆ. ಈ ಮಧ್ಯೆ ವಿಶ್ವವಿದ್ಯಾಲಯ ಬಹಳಷ್ಟು ಪ್ರಗತಿ ಸಾಧಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ಕುರಿತು ಸರಾಕರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಸಮಿತಿಯ ನಿಯೋಗ ಮಾಜಿ ಸಚಿವ ಬಿ.ಜೆ.ಪಿ. ಪಕ್ಷದ ಹಿರಿಯ ನಾಯಕರಾದ ಮಾಲಿಕಯ್ಯ ಗುತ್ತೇದಾರ ಅವರಿಗೆ ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಈ ಹಿಂದೆ ಕರ್ನಾಟಕ ನವಿಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿಯ ಪ್ರಾದೇಶಿಕ ಕಚೇರಿ ಮತ್ತು ಆಹಾರ ತಪಾಸಣಾ ಪ್ರಯೋಗಾಲಯ ಬೆಳಗಾವಿಗೆ ಸ್ಥಳಾಂತರ ಮಾಡಲಾಗಿತ್ತು, ಸ್ಥಳಾಂತರ ಮಾಡಿರುವದು ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ಒಟ್ಟಾರೆ, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ ಧೋರಣೆ ಮಾಡುತ್ತಿರುವುದರ ಬಗ್ಗೆ ಸಮಿತಿಯ ಮುಖಂಡರು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರವರೊಂದಿಗೆ ಚರ್ಚಿಸಿ ಪ್ರಸ್ತಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿಯೋಗದ ಮವನಿಗೆ ಸ್ಪಂದಿಸಿದ ಮಾಲಿಕಯ್ಯ ಗುತ್ತೇದಾರ ಈ ಭಾಗದ ಎಲ್ಲಾ ಸಚಿವರು, ಶಾಸಕರುಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳೊಂದಿಗೆ ಗಂಭೀರವಾಗಿ ಚರ್ಚೆ ನಡೆಸಿ ಭಾಗಕ್ಕೆ ಭವಿಷ್ಯದಲ್ಲಿ ಈ ರೀತಿ ಅನ್ಯಾಯ ಆಗದಂತೆ ಬದ್ಧತೆ ಪ್ರದರ್ಶಿಸುವುದಾಗಿ ಭರವಸೆ ನೀಡಿದರು ಎಂದು ನಿಯೋಗದ ನೇತೃತ್ವವಹಿಸಿದ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಭದ್ರಶೆಟ್ಟಿ, ಶಿವಲಿಂಗಪ್ಪ ಭಂಡಕ್, ಡಾ. ಮಾಜಿದ ದಾಗಿ, ಅಬ್ದುಲ ರಹೀಮ್, ಶಿವಾನಂದ ಬಿ. ಸೇರಿದಂತೆ ಅನೇಕರು ಇದ್ದರು.