ಕಲಬುರಗಿ: ಕಲಬುರಗಿಯಿಂದ ಏಮ್ಸ್ (AIIMS) ಅನ್ನು ಕಾರಣವಿಲ್ಲದೇ ಹುಬ್ಬಳ್ಳಿ- ಧಾರವಾಡಕ್ಕೆ ಸ್ಥಳಾಂತರಿಸುತ್ತಿರುವ ಕೇಂದ್ರ ಸರ್ಕಾರ ಕ್ರಮ ಖಂಡನಾರ್ಹ. ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದಿಂದ ಆಗುತ್ತಿರುವ ಬಹುದೊಡ್ಡ ಅನ್ಯಾಯವಿದು ಎಂದು ಭೀಮ್ ಆರ್ಮಿ ಭಾರತಾ ಏಕ್ತಾ ಮಿಷನ್ ಸಂಘಟನೆಯ ಯುವ ಘಟಕದ ರಾಜ್ಯ ಅಧ್ಯಕ್ಷರಾದ ಸಂತೋಷ ಬಿ ಪಾಳಾ ಖಂಡಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು
ನಿಜಾಮರ ಆಡಳಿತ ಕಾಲದಿಂದಲೂ ತುಳಿತಕ್ಕೆ ಒಳಗಾದ, ಮಲತಾಯಿ ಧೋರಣೆ ಅನುಭವಿಸಿದ ಜಿಲ್ಲೆಯ ಬಗ್ಗೆ ಸರ್ಕಾರ ತಾಳಿದ ನಿರ್ಧಾರ ಖಂಡನಾರ್ಹ. ಏಮ್ಸ್ ಸ್ಥಾಪನೆಗೆ ಎಲ್ಲ ಸೌಕರ್ಯಗಳೂ ಇದ್ದಾಗಿಯೂ ಏಕಾಏಕಿ ಇಂಥ ನಿರ್ಧಾರ ಕೈಗೊಂಡಿದ್ದ ಕಲ್ಯಾಣದ ನಾಡಿನ ಕನ್ನಡಿಗರನ್ನು ಕೆರಳಿಸಿದೆ. ಇದರ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಅವರು ಹೇಳಿದರು.
ಈ ಭಾಗಕ್ಕೆ ಸಿಕ್ಕ 371ಜೆ ಅಡಿಯಲ್ಲಿನ ಯಾವುದೇ ಸೌಕರ್ಯವನ್ನೂ ಪೂರ್ಣವಾಗಿ ನೀಡಿಲ್ಲ. ಹೈದರಾಬಾದ್ ಕರ್ನಾಟಕ ಎಂಬ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿದ್ದನ್ನು ಬಿಟ್ಟರೆ ರಾಜ್ಯ ಸರ್ಕಾರ ಕೂಡ ಏನನ್ನೂ ಈ ಭಾಗಕ್ಕೆ ನೀಡಿಲ್ಲ. ಡಾ.ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ಜಿಲ್ಲೆಗೆ ಮಂಜೂರಾಗ ಬೇಕಾಗಿದ್ದ ಏಮ್ಸ್ ಅನ್ನು ಸದ್ದಿಲ್ಲದೆ ರಾಜಕೀಯವಾಗಿ ಒತ್ತಡ ಹೇರಿ ಹುಬ್ಬಳ್ಳಿ- ಧಾರವಾಡಕ್ಕೆ ಸ್ಥಳಾಂತರಿಸಲಾಗಿದೆ.
ಈ ಧೋರಣೆ ಕೈಬಿಟ್ಟು ಏಮ್ಸ್ ಅನ್ನು ಮರಳಿ ಕಲಬುರ್ಗಿಗೇ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭೀಮ್ ಆರ್ಮಿ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.