ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದ ಗುಡ್ಡದ ತಿಮ್ಮಪ್ಪ ದೇವಸ್ಥಾನದ ಬಳಿಯಲ್ಲಿ ಬುಧವಾರ ರಾತ್ರಿ ನಿಧಿಗಳ್ಳರು ನಿಧಿಗಾಗಿ ನೆಲ ಅಗೆದಿರುವ ಘಟನೆ ನಡೆದಿದೆ.
ದೇವರಗೋನಾಲ ಮತ್ತು ಸುತ್ತಮುತ್ತಲ ಗ್ರಾಮದ ಜನರ ಆರಾಧ್ಯ ದೈವವಾಗಿರುವ ಗುಡ್ಡದ ತಿಮ್ಮಪ್ಪ ದೇವರು ಊರಿಂದ ಅನತಿ ದೂರದಲ್ಲಿರುವುದರಿಂದ ದೇವಸ್ಥಾನದ ಬಳಿಯಲ್ಲಿ ರಾತ್ರಿ ವೇಳೆಯಲ್ಲಿ ಜನರು ಇಲ್ಲದಿರುವುದನ್ನು ಅರಿತು ನಿಧಿಗಾಗಿ ದೇವಸ್ಥಾನದ ಗೋಡೆಯ ಬಳಿಯ ನೆಲವನ್ನು ಅಗೆಯಲಾಗಿದೆ.ಆದರೆ ನಿಧಿ ದೊರೆತ ಬಗ್ಗೆ ತನಿಖೆಯಿಂದ ತಿಳಿದುಬರಬೇಕಿದೆ.
ಈ ಘಟನೆ ಕುರಿತು ದೇವರಗೋನಾಲ ಗ್ರಾಮದ ಮುಖಂಡ ವೆಂಕಟೇಶ ಬೇಟೆಗಾರ ಮಾತನಾಡಿ,ಯಾರೋ ಕಿಡಿಗೇಡಿಗಳು ದೇವರ ಬಳಿಯೆ ನಿಧಿಗಾಗಿ ನೆಲ ಅಗೆದಿದ್ದಾರೆ,ಗುಡ್ಡದ ತಿಮ್ಮಪ್ಪ ದೇವರು ಸತ್ಯವುಳ್ಳ ದೇವರಾಗಿದ್ದು ಇಲ್ಲಿ ಅನೇಕ ಪವಾಡ ಸದೃಶ ಘಟನೆಗಳು ಕಣ್ಮುಂದಿವೆ,ದೇವಸ್ಥಾನದ ಬಳಿಯಲ್ಲಿನ ಚಿಕ್ಕ ಹೊಂಡವು ಬೇಸಿಗೆಯಲ್ಲೂ ನೀರು ಇರುವ ಮೂಲಕ ದೇವರ ಪವಾಡ ಎನ್ನುವಂತಿದೆ.
ನಮ್ಮ ಭಾಗದಲ್ಲಿ ಮಳೆ ಬಾರದಿರುವಾದ ಈ ದೇವರಿಗೆ ಪರವು ಮಾಡಿದಾಗ ಮಳೆ ಬಂದ ಅನೇಕ ಉದಾಹರಣೆಗಳಿವೆ,ಇಂತಹ ದೇವರ ಬಳಿಯೆ ನಿಧಿ ಕಳ್ಳತನಕ್ಕೆ ಬಂದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.ತಾಲೂಕು ಆಡಳಿತ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ನಿಧಿಗಾಗಿ ಶೋಧ ನಡೆಸಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.