ಕಲಬುರಗಿ: ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು, ಮಹಿಳೆಯರು ಮತ್ತು ವಿಶ್ವಕರ್ಮ ನಿಗಮ ಮಂಡಳಿ ಅಧ್ಯಕ್ಷರ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಹಗುರವಾಗಿ ಮಾತನಾಡುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಡಗಹಳ್ಳಿ ಗ್ರಾಮದ ಪಾಪಾಚಾರಿ ಅಲಿಯಾಸ್ ಮೂರ್ತಾಚಾರ್ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ವಿಶ್ವಕರ್ಮ ಹೋರಾಟ ಸಮಿತಿ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಆಗ್ರಹಿಸಿದ್ದಾರೆ.
ಪಾಪಚಾರಿ ಅವರು ಸಮಾಜದ ರಾಷ್ಟ್ರೀಯ ಸಂತ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ, ಜಗದ್ಗುರು ನೀಲಕಂಠಾಚಾರ್ಯ ಸ್ವಾಮೀಜಿ, ವಿಶ್ವಕರ್ಮ ನಿಗಮ ಮಂಡಳಿ ಅಧ್ಯಕ್ಷ ಬಾಬು ಪತ್ತಾರ ಮತ್ತು ಸೀಮಾ ಆಚಾರ್ಯ ಅವರ ಬಗ್ಗೆ ಹಗರುವಾಗಿ ಮಾತನಾಡಿದ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಮೂಲಕ ಸಮಾಜದ ಘನತೆ, ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.
ಇಷ್ಟಾದರೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾದ ರಾಜ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದ ಸ್ಯರಾದ ಕೆ.ಪಿ.ನಂಜುಂಡಿ ಅವರು ಪಾಪಚಾರಿ ಅವರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಂಜುಂಡಿ ಅವರು ಪಾಪಚಾರಿ ಅವರನ್ನು ಕರೆಯಿಸಿ ಬಹಿರಂಗವಾಗಿ ಕ್ಷಮೆಯಾಚಿ ಸುವಂತೆ ಮಾಡ ಬೇಕು ಜೊತೆಗೆ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ದೇವೇಂದ್ರ ಕಲ್ಲೂರ ಅವರು ಆಗ್ರಹಿಸಿದ್ದಾರೆ.
ಒಂದು ವೇಳೆ ಪಾಪಚಾರಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಸಮಿತಿ ವತಿಯಿಂದ ಹೋರಾಟ ನಡೆಸಬೇಕಾದದ್ದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.