ಕಲಬುರಗಿ: ಎಲ್ಲ ಕಾವ್ಯ ಪ್ರಕಾರಗಳ ರಾಣಿ ಗಜಲ್. ಅದರಲ್ಲೂ ಗಾಲಿಬ್ ಅವರ ಗಜಲ್ ಗಳು ಎತ್ತಿ ಹೇಳುವಂತಿವೆ ಎಂದು ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಹೇಳಿದರು.
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಅಡಿಯಲ್ಲಿ ನಗರದ ಕಲಾ ಮಂಡಳದಲ್ಲಿ ಭಾನುವಾರ ಜರುಗಿದ ಡಾ. ಮಲ್ಲಿನಾಥ ತಳವಾರ ಅವರ ಗಾಲಿಬ್ ಸ್ಮೃತಿ ಗಜಲ್ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ತಳವಾರ ಅವರ ಗಜಲ್ ಗಳಲ್ಲಿ ಕನ್ನಡ, ಉರ್ದು ಪದಗಳನ್ನು ಬಳಸುವ ಮೂಲಕ ತಳವಾರ ಅವರು ಗಜಲ್ ಪ್ರಕಾರಕ್ಕೆ ಒಂದು ಮೆರಗು ತಂದು ಕೊಟ್ಟಿದ್ದಾರೆ ಎಂದರು.
ಮುಖವಾಡ ಹಾಕುವವರ ವಿರುದ್ಧ, ವ್ಯವಸ್ಥೆಯ ವಿರುದ್ಧ ಸಿಟ್ಟು ಪ್ರದರ್ಶಿಸುವಂತಿವೆ. ಇವರ ಗಜಲ್ ಮೇಲ್ನೋಟಕ್ಕೆ ಒಂದು ಅರ್ಥವಿದ್ದರೆ, ಒಳ ನೋಟ ಇನ್ನೊಂದು ಅರ್ಥಕೊಡುವಂತಿವೆ ಎಂದು ತಿಳಿಸಿದರು.
ಕನ್ನಡದ ಗಜಲ್ ಪರಂಪರೆಯ ಮುಖ್ಯ ಧ್ವನಿಯಾಗಲಿ ಎಂದು ಆಶಿಸಿದರು.
ಗುಲ್ಬರ್ಗ ವಿವಿ ಉರ್ದು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ ರಬ್ ಪುಸ್ತಕ ಜನಾರ್ಪಣೆ ಮಾಡಿ ತುಂಬ ಅರ್ಥಪೂರ್ಣವಾಗಿ ಮಾತನಾಡಿದರು.
ಗುಲ್ಬರ್ಗ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಚಂದ್ರಕಾಂತ ಕೆಳಮನಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಕಾರ್ಯಕ್ರಮದ ಅಧ್ತಕ್ಷತೆ ವಹಿಸಿದ್ದರು.
ಪ್ರೊ.ಎಚ್.ಟಿ. ಪೋತೆ, ಮಹಿಪಾಲರೆಡ್ಡಿ ಮುನ್ನೂರ, ಡಾ. ಸೂರ್ಯಕಾಂತ ಪಾಟೀಲ, ಡಾ. ಚಿ.ಸಿ. ನಿಂಗಣ್ಣ, ಡಾ. ಶಿವರಂಜನ್ ಸತ್ಯಂಪೇಟೆ, ಡಾ. ಶರಣಬಸಪ್ಪ ವಡ್ಡನಕೇರಿ, ಪ್ರೇಮಾ ಹೂಗಾರ, ಸಿದ್ಧರಾಮ ಹೊನ್ಕಲ್, ವಿ.ಸಿ. ನೀರಡಗಿ ಇತರರು ಭಾಗವಹಿಸಿದ್ದರು.
ಆರ್.ಜೆ. ಮಂಜುನಾಥ ನಿರೂಪಿಸಿದರು. ಲೇಖಕ ಡಾ. ಮಲ್ಲಿನಾಥ ತಳವಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ಧಲಿಂಗ ಬಾಳಿ ರಾವೂರ ವಂದಿಸಿದರು.